ಈ ಪುಟವನ್ನು ಪ್ರಕಟಿಸಲಾಗಿದೆ

134
ಸ್ವತಂತ್ರ ಬುದ್ಧಿಯಿಂದ ಅವರು ದೇವನೊಬ್ಬ, ನಾಮ ಹಲವು ಎಂಬ ಮಹಾತತ್ತ್ವವನ್ನು ಚೆನ್ನಾಗಿ ಅರಿತರು ; ತಮ್ಮ ವಿಮಲವಾದ ಭಾವದಿಂದ ಆತನನ್ನು ಪ್ರೀತಿಸಿದರು ; ಹಾಗೂ ಪ್ರಬಲವಾದ ಸಾಧನದಿಂದ ಆತನನ್ನು ಕಂಡರು, ಆತನ ಆನಂದವನ್ನು ಉಂಡರು, ಆತನಲ್ಲಿ ಬೆರೆತು ಸಮರಸರಾದರು. ಇದಾಯಿತು ಅವರ ಆತ್ಮೋದ್ದಾರದ ಮಾತು. ಭಗವಂತನ ಆದೇಶದಿಂದ ಕೈಕೊಂಡ ಲೋಕೋದ್ಧಾರದ ಕಾರ್ಯದಲ್ಲಿಯೂ ಅವರು ತಮ್ಮ ಈ ತ್ರಿವಿಧ ಶಕ್ತಿಗಳನ್ನು ಚೆನ್ನಾಗಿ ಬಳಸಿದರು. ಅವರ ಸ್ವತಂತ್ರ ಬುದ್ಧಿಯು ಅವರಿಗೆ 'ಭಗವಂತನ ಸಾಮ್ರಾಜ್ಯದಲ್ಲಿಯ ಸಮತೆ' ಯನ್ನು ಕಾಣಿಸಿತು. ಅದನ್ನವರ ವಿಶಾಲಭಾವವು ಕೂಡಲೇ ಪ್ರಬಲವಾಗಿ ಪ್ರೀತಿಸತೊಡಗಿತು, ಹಾಗೂ ಅದನ್ನು ಸಮಾಜದಲ್ಲಿ ನೆಲೆಗೊಳಿಸಲು ಬಯಸಿತು. ಅವರ ಸಮರ್ಥವಾದ ಸಂಕಲ್ಪವು-ಕ್ರಿಯಾಶಕ್ತಿಯು ಅದನ್ನು ಕಾರ್ಯ -ರಂಗಕ್ಕಿಳಿಸಲು ತುಂಬ ಅವಿರತವಾಗಿ ಹೆಣಗಿತು. ಅದರ ಫಲವಾಗಿ ಅವರ ಕನಸು ನನಾಯಿತು. ಅಧ್ಯಾತ್ಮದ ತಳಹದಿಯ ಮೇಲೆ ನಿಲ್ಲಿಸಲಾದ ವೀರಶೈವಬಾಂಧವ್ಯವು ಕನ್ನಡನಾಡಿನಲ್ಲಿ ನೆಲೆಕೊಂಡಿತು. ತಮ್ಮ ಕಾರ್ಯವು ಮೂರ್ತಸ್ವರೂಪ ತಳೆದುದನ್ನು ಕಂಡು ಬಸವಣ್ಣನವರಿಗೆ ಅದೆಷ್ಟು ಆನಂದವಾಗಿರಬೇಡ ? ಆದರೆ ಆ ಆನಂದವನ್ನು ಸವಿಯುವ ಭಾಗ್ಯ ಮಾತ್ರ ಅವರಿಗೆ ಬಹುಕಾಲ ಲಭಿಸಲಿಲ್ಲ. ತಿಳುವಳಿಕೆ ಸಾಲದ ಅವರ ಕೆಲ ಭಕ್ತರು ತಾಳ್ಮೆಗೆಟ್ಟರು. ಅವರ ತೂಕ ತಪ್ಪಿತು. ಅದರ ಫಲವಾಗಿ ಎಲ್ಲರಿಗೂ ಶೋಕವಾಯಿತು. ತಾತ್ಕಾಲಿಕವಾಗಿ ಬಸವಣ್ಣನವರ ಮಹಾಕಾರ್ಯವು ಅಳಿಯುವ ಗುಂಡಾಂತರವನ್ನು ಎದುರಿಸಬೇಕಾಯಿತು. ಆದರೆ ಅವರ ಪುಣ್ಯದ ಬಲದಿಂದ ವೀರಶೈವಬಾಂಧವ್ಯವು ಇಂದಿನವರೆಗೆ ಬಸವಣ್ಣನವರ ದಿವ್ಯ ಭವ್ಯ ಸ್ಮಾರಕವಾಗಿ ಉಳಿದಿದೆ. ಇಂಥ ಉಜ್ವಲ ಸ್ಮಾರಕವನ್ನು ಪಡೆವ ಸೌಭಾಗ್ಯ ಪ್ರಪಂಚದಲ್ಲಿ ಅದೆಷ್ಟು ಮಹಾತ್ಮರಿಗೆ ಲಭಿಸಿರುವುದು?
ಬಸವಣ್ಣನವರು ತಮ್ಮ ಅದ್ಭುತ ಪ್ರಭಾವದಿಂದ ಧಾರ್ಮಿಕ ಕ್ಷೇತ್ರದಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿಯೂ ಮಾಡಿದ ಕ್ರಾಂತಿಕಾರಕ