ಈ ಪುಟವನ್ನು ಪ್ರಕಟಿಸಲಾಗಿದೆ
145

ಬಯಸುವ ಒಬ್ಬಿಬ್ಬ ಜಾಣರು ಒಳನೋಟದಿಂದ ಅಂತರಾತ್ಮನನ್ನು ಕಾಣುವರು.

ಈ ಒಳನೋಟವು ಮೊದಲು ನಮಗೆ ನಮ್ಮ ಗುಣದೋಷಗಳನ್ನು ಕಾಣಿಸುವುದು. ಅದರ ನೆರವಿನಿಂದ ಅವನ್ನು ಕಂಡು, ಆನಂತರ ನಮ್ಮಲ್ಲಿಯ ದೋಷಗಳನ್ನು ಅಳಿಸಲು, ಹಾಗೂ ಗುಣಗಳನ್ನು ಬೆಳೆಸಲು ನಾವು ಸತತವಾಗಿ ಯತ್ನಿಸಬೇಕು. ಅಂದರೆ ಅದರಿಂದ ನಮ್ಮ ನೈತಿಕ ಉನ್ನತಿಯು ಸಾಧ್ಯ ಆಗುವದು.

ಬಸವಣ್ಣನವರು ಕೆಲ ಪ್ರಧಾನ ಅವಗುಣಗಳನ್ನು ತೊರೆಯಲು, ಕೆಲ ಪ್ರಧಾನ ಗುಣಗಳನ್ನು ಪೊರೆಯಲು ಬೋಧಿಸಿರುವರು. ಅವರು ತೊರೆಯ ಹೇಳಿದ ಅವಗುಣಗಳನ್ನು ಕೆಳಗಿನ ಅವರ ನುಡಿಗಳಲ್ಲಿ ಕಾಣಬಹುದು :

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಪರಧನವ ಬಯಸದಿರು, ಪರನಾರಿಗೆ ಹೆದರುತಿರು.

ಈ ಬಗೆಯಾಗಿ ಕಾಮಕ್ರೋಧಗಳನ್ನೂ ಅವುಗಳ ಸಂತಾನಗಳು ಆದ ಅನ್ಯ ಅವಗುಣಗಳನ್ನೂ ಅವರ ತೊರೆಯಲು ಬೋಧಿಸಿದರು. ಬಸವಣ್ಣನವರು ಬೆಳೆಸ ಹೇಳಿದ ಪ್ರಧಾನ ಸದ್ಗುಣಗಳಲ್ಲಿ ಸತ್ಯವು ಮೊದಲನೆಯದು.

ದಿಟವ ನುಡಿಯಿರಿ, ನುಡಿದಂತೆ ನಡೆಯಿರಿ' ಎಂಬುದು ಅವರ ಸತ್ಯ ಧರ್ಮದ ಸಂದೇಶ, ಮತಿ-ಮಾತು- ಕೃತಿಗಳಲ್ಲಿ ಏಕರೂಪತೆಯೇ ಸತ್ಯ. ಪವಿತ್ರವಾದ ಮತಿಗೆ ದೊರೆತ ಸತ್ಯದ ಕಾಣ್ಣೆಯು ಮಾತಿನಲ್ಲಿ ಹೊಳೆಯಬೇಕು, ಕೃತಿಯಲ್ಲಿ ಇಳಿಯಬೇಕು. ಅಂದರೆ ಸತ್ಯಧರ್ಮ ನೆರವೇರುವದು. 'ಚಿತ್ತೇ ವಾಚಿ ಕ್ರಿಯಾಯಾಂ ಚ ಸಾಧೂನಾಮೇಕರೂಪತಾ' ಎಂಬುದನ್ನು ನೆನೆಯಬೇಕು.