ಈ ಪುಟವನ್ನು ಪ್ರಕಟಿಸಲಾಗಿದೆ

4

ಪ್ರಧಾನವಾದ ಮತಗಳ ಆಕರ್ಷಣೆಯನ್ನು ತರುಬಲು ಅದಕ್ಕೆ ಶಕ್ತಿ ಸಾಲದಾಗಿತ್ತು. ವೈದಿಕ ಮತಗಳು ಶುಷ್ಕ ಆಚಾರಧರ್ಮದ ಬೆನ್ನು ಹತ್ತಿದ್ದವು. ಅದರಿಂದ ತೋರಿದ ದಾಂಭಿಕತೆ, ಹೆಚ್ಚುಕಡಿಮೆ ಎಂಬ ಭಾವನೆ, ಅಂಧವಿಶ್ವಾಸದ ಆಧಾರದಿಂದ ನಡೆಸಿದ ಸುಲಿಗೆ ಇವಕ್ಕೆ ದಾರುಣವಾದ ಪ್ರತಿಭಟನೆ ಗುಡುಗು ಹಾಕುತ್ತಿರಬೇಕು. ನವೀನ ಬುದ್ದಿಯಿಂದ ಸಮಾಜಕ್ಕೆ ದಾರಿ ತೋರಿ, ಕೆಡುಕನ್ನು ತಿದ್ದುವ ಮಹಾವ್ಯಕ್ತಿಗಳ ಉದಯಕ್ಕೆ ಇದು ಯೋಗ್ಯ ಸಮಯವಾಯಿತು. ಬಸವೇಶ್ವರ, ಪ್ರಭುದೇವ, ಸಿದ್ದರಾಮರಂಥ ಶಿವಶರಣರನ್ನು 'ಕಲ್ಯಾಣ' ಪಥಕ್ಕೆ ಕರೆಯುವ ಕಹಳೆಯನ್ನು ಕಾಲ ಊದಿದಂತಾಯಿತು. ನಾಡಿನಲ್ಲಿ ಆಗ ಅನೇಕ ಶೈವಪಂಥಗಳು ಇದ್ದವು... ಶಿವಶರಣರು ಇವುಗಳ ಸಾರವನ್ನು ಸ್ವೀಕರಿಸಿ... ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ತಳಹದಿಯನ್ನಾಗಿ ಮಾಡಿಕೊಂಡರು.

ಅಂದಿನ ಸುಸಂಸ್ಕೃತರು, ಮೇಲ್ಕಾಣಿಸಿದಂತೆ, ತಮ್ಮ ಧರ್ಮ-ಪಂಥಗಳ ತಿರುಳನ್ನು ತೊರೆದು, ಜಳ್ಳು ಆಚಾರಗಳನ್ನು ಅಪ್ಪಿ ದಂಭದ ಹುಸಿ ಮೆರುಗಿನಿಂದ ಮೆರೆಯುತ್ತಿದ್ದರು. 'ಅರುಹಿರಿಯರನ್ನು' ಪ್ರಭುದೇವರು ಈ ಬಗೆಯಾಗಿ ಬಣ್ಣಿಸಿರುವರು :

ಆದ್ಯರಲ್ಲ ವೇದ್ಯರಲ್ಲ, ಸಾಧ್ಯರಲ್ಲದ ಹಿರಿಯರು ನೋಡಾ !
ತನುವಿಕಾರ, ಮನವಿಕಾರ, ಇಂದ್ರಿಯವಿಕಾರದ ಹಿರಿಯರು
ನೋಡಾ!
ಶಿವಚಿಂತೆ, ಶಿವಜ್ಞಾನಿಗಳ ಕಂಡರೆ, ಅಳಿವಾಡಿ ನುಡಿವರು.
ಗುಹೇಶ್ವರನರಿಯದ ಕರ್ಮಿಗಳಯ್ಯಾ!

ಇವರದು ವಿಕೃತಬುದ್ಧಿ, ವಿಪರೀತ ನಡೆನುಡಿ, "ಇವರಿಗೆ ಹಗಲೇ ಇರುಳು, ಇರುಳೇ ಹಗಲು ; ಆಚಾರವೇ ಅನಾಚಾರ, ಅನಾಚಾರವೇ ಆಚಾರ ; ಭಕ್ತರೇ ಭವಿಗಳು, ಭವಿಗಳೇ ಭಕ್ತರು. ಇಂಥವರ ನಡೆ

೧. ಕ.ಸಾ.ಚ. ಪು. ೧೪೬