ಈ ಪುಟವನ್ನು ಪ್ರಕಟಿಸಲಾಗಿದೆ

16

ಅಜ್ಜಿಯೂ ಅಕ್ಕನೂ ಅವನಿಗೆ ಮಹಾಭಾರತ, ರಾಮಾಯಣ, ಹಾಗೂ ಶೈವಪುರಾಣಗಳಲ್ಲಿಯ ಕಥೆಗಳನ್ನು ಹೇಳಿ ಆತನ ಎಳೆಯ ಹೃದಯದಲ್ಲಿ ಭಕ್ತಿಯ ಒಳ್ಳೆ ಸಂಸ್ಕಾರಗಳನ್ನು ಮೂಡಿಸಿದರು. ಬಸವನ ಎಂಟನೆಯ ವರುಷ ಆತನ ಉಪನಯನವಾಯಿತು. ತಂದೆಯವರಿರುವಾಗಲೇ ನಾಗಮ್ಮನ ಮದುವೆ ಆದ ಮೂಲಕ, ಅವಳ ಯಜಮಾನನಾದ ಶಿವದೇವನು ಅವರ ಮನೆಯ ವ್ಯವಸ್ಥೆಯನ್ನು ನೋಡಲು ಅಲ್ಲಿಯೇ ಬಂದು ನಿಂತಿದ್ದನು. ಅವನು ಬಸವನಿಗೆ ಸಂಧ್ಯಾವಂದನೆ, ಪುರುಷಸೂಕ್ತ ಮತ್ತು ಪೂಜಾವೈಶ್ವದೇವಾದಿ ಮಂತ್ರಗಳನ್ನು ಕಲಿಸಿದನು. ಮುಂದೆ ಬಸವನು ಪಾಠಶಾಲೆಯಲ್ಲಿ ಹೆಚ್ಚಿನ ಅಧ್ಯಯನವನ್ನು ನಡೆಸಿದನು. ಅಲ್ಲಿ ಅವನು ಪಂಡಿತ-ಗುರುಗಳಿಂದ ಸಂಸ್ಕೃತವನ್ನೂ ವೇದ, ಆಗಮ, ಉಪನಿಷತ್ತುಗಳು, ಶೈವಪುರಾಣಗಳು ಇತ್ಯಾದಿ ವಿಷಯಗಳನ್ನೂ ಕಲಿಯಲಾರಂಭಿಸಿದನು. ಮಿಕ್ಕ ಸಮಯವನ್ನು ಅವನು ಗೆಳೆಯರೊಡನೆ ಆಟ ನೋಟಗಳಲ್ಲಿ ಕಳೆಯುತ್ತಿದ್ದನು.

ಬಸವನ ಗೆಳೆಯರಲ್ಲಿ ಕೃಷ್ಣ ಅವನ ನೆಚ್ಚಿನವನು. ಇಬ್ಬರೂ ಒಬ್ಬರನ್ನು ಒಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಅವರು ಬಹುತರವಾಗಿ ಒಂದೆಡೆಯಲ್ಲಿಯೇ ಇರುತ್ತಿದ್ದರು. ಅವರು ಸದೈವ ಕೂಡಿಯೇ ಆಡುವರು. ಬಸವನ ಮನೆಯೇ ಕೃಷ್ಣನ ಮನೆಯಾಗಿತ್ತು ಒಮ್ಮೆಯಂತೂ ಬಸವನು ಕೃಷ್ಣನನ್ನು ಒಂದು ಭೀಕರ ಗಂಡಾಂತರದಿಂದ ಉಳಿಸಿದನು. ಅದರಿಂದ ಬಸವನಲ್ಲಿ ಕೃಷ್ಣನ ಪ್ರೀತಿವಿಶ್ವಾಸಗಳು ಅತಿಯಾಗಿ ಬೆಳೆದವು. ಈ ಘಟನೆಯು ನಡೆದುದು ಕೆಳಗೆ ಕಾಣಿಸಿದಂತೆ:

ಒಂದು ದಿನ ಬಸವನು ತನ್ನ ಬಾಲಗೆಳೆಯರೊಡನೆ ಈಜಲು ಒಂದು ದೊಡ್ಡ ಬಾವಿಗೆ ಹೋದನು. ಬಾವಿಯಲ್ಲಿ ಎಲ್ಲರೂ ತುಂಬ ಉತ್ಸಾಹದಿಂದ ಈಜುಬಿದ್ದರು. ಕೂಡಲೇ ಅವರು ನೀರಿನಲ್ಲಿ ಬಗೆಬಗೆಯ ಆಟಗಳನ್ನು ಪ್ರಾರಂಭಿಸಿದರು. ಕೆಲವರು ಮೇಲಿನಿಂದಲೇ ನೀರಿನಲ್ಲಿ ಜಿಗಿದರು; ಕೆಲವರು ಅದರಲ್ಲಿ ಸುರಂಗಗಳನ್ನು ಹೊಡೆದರು; ಕೆಲವರು ನೀರಿನಲ್ಲಿ ಮುಳುಗುವ ಆಟವನ್ನು ಆಡಿದರು; ಕೆಲವರು ಪರಸ್ಪರರ ಮುಖದ ಮೇಲೆ ನೀರು ಕೊಚ್ಚ ತೊಡಗಿದರು. ಕೃಷ್ಣನು ಅದೇ ಈಜಲು