ಈ ಪುಟವನ್ನು ಪ್ರಕಟಿಸಲಾಗಿದೆ
15

ಕುಳಿತುಕೊಳ್ಳುವ, ಇವೆಲ್ಲ ಸಂಗತಿಗಳ ಫಲವಾಗಿ ಆತನ ಮುಖದ ಮೇಲೆ ಒಂದು ಅಲೌಕಿಕ ಕಾಂತಿಯು ಹೊಳೆಯುತ್ತಿತ್ತು. ಅವನ ಮಾತಿನಲ್ಲಿ ವಿಲಕ್ಷಣವಾದ ಸೆಳೆತವು ನೆಲೆಗೊಂಡಿದ್ದಿತು. ಅದರ ಮೂಲಕ ಬಸವನ ಸಂಗಡಿಗರ ಒಲವನ್ನೂ ಗೌರವವನ್ನೂ ಗಳಿಸಿದ್ದನು.

ಬಾಗೇವಾಡಿಯು ಒಂದು ಅಗ್ರಹಾರ, ಅಗ್ರಹಾರಗಳು ನಮ್ಮ ನಾಡಿನಲ್ಲಿಯ ಒಂದು ಕಾಲದ ಶಿಕ್ಷಣ ಕೇಂದ್ರಗಳಾಗಿದ್ದವು. ಇಂಥ ಕೇಂದ್ರಗಳ ಹೇರಳತೆಯಿಂದಲೇ ನಮ್ಮ ನಾಡಿನ ಸಂಸ್ಕೃತಿಯು ಪ್ರಾಚೀನ ಕಾಲಲ್ಲಿಯೂ ಮಧ್ಯಯುಗದಲ್ಲಿಯೂ ಚೆನ್ನಾಗಿ ಬಾಳಿ ಬೆಳೆಯಿತು. ಎಲ್ಲ ಅಗ್ರಹಾರಗಳಂತೆ ಬಾಗೇವಾಡಿಯು ಕೂಡ ರಮಣೀಯವಾದ ಪ್ರಾಕೃತ ಪರಿಸರದಲ್ಲಿ ನೆಲೆಸಿದ ಒಂದು ಹಳ್ಳಿಯಾಗಿದ್ದಿತು. ಅದು ಸ್ವಯಂಪೂರ್ಣವಾಗಿದ್ದಿತು. ಅಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಭೋಜನಗಳು ಲಭಿಸುತ್ತಿದ್ದವು. ಅಲ್ಲಿ ವೇದ, ವೇದಾಂತ, ಪುರಾಣ, ಸ್ಮೃತಿ, ದರ್ಶನ, ಭಾಷೆ, ಸಾಹಿತ್ಯ, ಕಾವ್ಯ, ನಾಟಕ ಹಾಗೂ ಬೇರೆ ಲಲಿತಕಲೆಗಳ ಶಿಕ್ಷಣವು ಕೊಡಲಾಗುತ್ತಿತ್ತು. ಒಂದೊಂದು ವಿದ್ಯೆಯಲ್ಲಿ ಪಾರಂಗತತೆಗೆ ತುಂಬ ಪ್ರಾಧಾನ್ಯವಿದ್ದಿತು. ಸ್ಮೃತಿಶಕ್ತಿ ಸಮಯ ಸೂಚಕತೆ, ವಾದಕೌಶಲ್ಯ, ಮಾತುಗಾರಿಕೆ ಇವುಗಳಿಗೆ ಹೆಚ್ಚಿನ ಬೆಲೆಯು ನೀಡಲಾಗುತ್ತಿದ್ದಿತು. ಈ ಬಗೆಯ ಶಿಕ್ಷಣವು ಅಲ್ಲಿ ದೊರೆಯುತ್ತಿದ್ದಿತು. ಬಸವನ ತಂದೆಯವರು ಈ ಅಗ್ರಹಾರದ ಒಡೆಯರು- ಪ್ರಮುಖರು ಇದ್ದುದರಿಂದ, ಅವರು ನಿಧನಹೊಂದಿದರೂ ಕೂಡ, ಬಸವನ ಶಿಕ್ಷಣವು ಚೆನ್ನಾಗಿಯೇ ನಡೆಯಿತು. ಅಕ್ಕ ನಾಗಾಂಬಿಕೆಯು ಸುಸಂಸ್ಕೃತಳು ಮತ್ತು ಸುಶಿಕ್ಷಿತಳು. ಪೂಜ್ಯ ತಂದೆಯವರಿಂದ ಒಳ್ಳೆಯ ಶಿಕ್ಷಣವನ್ನು ಪಡೆದವಳು. ಬಾಲಬಸವನಿಗೆ ಅವಳೇ ಕನ್ನಡ ಓದುಬರಹವನ್ನು ಕಲಿಸಿದಳು.

2. H.K.P. 156: “The Agraharas may be said to have constituted the real Universities of Mediaval India.., the schools of universal learning.”

(Kadambakula, P 287)