ಈ ಪುಟವನ್ನು ಪ್ರಕಟಿಸಲಾಗಿದೆ

18

!" ಹೀಗೆಂದು ಕೃಷ್ಣನು ಬಸವನನ್ನು ಅಶ್ರುಗಳಿಂದ ಎರೆದ. ಅದನ್ನು ಕೇಳಿ ಬಸವನೆಂದ: "ಕೃಷ್ಣಾ ನಿನ್ನನ್ನು ಉಳಿಸಿರುವನು ಪರಶಿವನಯ್ಯ!

ಆತ ಕೊಲಬಯಸಿದರೆ, ಕಾಯಬಲ್ಲವರಾರು? ಆತ ಕಾಯುತಲಿರಲು, ಕೊಲ್ಲಬಲ್ಲವರಾರು?

ಆದುದರಿಂದ ಆತನನ್ನೆ ನಂಬುತಿರು, ನೆನೆಯುತಿರು! ಆತನಡಿಗಳ ನೆಮ್ಮಿ ನಿಲ್ಲುತಿರು, ನಲಿಯುತಿರಯ್ಯಾ! ಬಸವನ ಈ ಸ್ಪೂರ್ತಿಯುತ ಬೋಧನೆಯನ್ನು ಕೇಳಿ ನೆರೆದ ಜನರೆಲ್ಲ ಆತನನ್ನು ಕೊಂಡಾಡಿದರು. ಬಸವನನ್ನು ಹಿಂಸಿಸಿದವರು ಅತಿಯಾಗಿ ವ್ಯಸನಪಟ್ಟರು. ಬಸವನ ಬಾಲ್ಯವು ಈ ಬಗೆಯ ಅಧ್ಯಯನ ಧ್ಯಾನಗಳಲ್ಲಿಯೂ ಆಟನೋಟಗಳಲ್ಲಿಯೂ ಸಲೀಲವಾಗಿ ಸಾಗಿತು. ಅವನು ಗ್ರಾಮದ ಎಲ್ಲ ಜನರ ಕಣ್ಮಣಿ ಆದನು. ನಿಧಾನವಾಗಿ ಆತನು ಯೌವನದಲ್ಲಿ ಕಾಲಿರಿಸಿದನು.

ಪರಿವರ್ತನ

ಬಸವಣ್ಣನ ದಾರ್ಶನಿಕ ಬುದ್ಧಿಯು ಅತೀವ ಸ್ವತಂತ್ರವಾದುದು, ಹರಿತ ಆದುದು; ಅವನ ಕವಿಹೃದಯವು ಬಲು ಕೋಮಲವಾದುದು, ವಿಶಾಲ ಆದುದು; ಅವನ ಛಲವು ದೃಢವಾದುದು, ಅಚಲವಾದುದು. ಶಿವನಲ್ಲಿಯ ಆತನ ಭಕ್ತಿಯು ಅದ್ವಿತೀಯವಾದುದು, ಅಲೌಕಿಕವಾದುದು. ಬಸವಣ್ಣನ ಪಾವನವಾದ ಜೀವನಮಂದಿರವು ಈ ನಾಲ್ಕು ಕಂಬಗಳನ್ನು ಆಶ್ರಯಿಸಿರುವುದು. ಈ ಶಾಶ್ವತ ತಳಹದಿಯ ಮೇಲೆ ನಿಂತಿರುವದು. ಅವನ ಬುದ್ದಿಯು ಎಲ್ಲ ವಿಷಯಗಳ ಸಾರವನ್ನು ಅರಿಯಲು ಯತ್ನಿಸಿತು, ಹೃದಯವು ಪರಿಸರದ ನೋವಿನಿಂದ ನವೆಯಿತು, ನಲಿವಿನಿಂದ ನಲಿಯಿತು. ಬುದ್ದಿಯು ಕಾಣಿಸಿದ ಸಾರಭೂತ ತತ್ತ್ವಗಳನ್ನೂ ಅಂತರಂಗದಲ್ಲಿ ಜನಿಸಿದ ಭಾವಲಹರಿಗಳನ್ನೂ ಅದು ವಚನಗಳ ಸವಿನುಡಿಗಳಲ್ಲಿ ಮೂಡಿಸಲು ಯತ್ನಿಸಿತು. ಬಸವಣ್ಣನ ನುಡಿಯು 'ಮುತ್ತಿನ ಹಾರವಾಯಿತು, ಮಾಣಿಕ್ಯದ ದೀಪ್ತಿಯಾಯಿತು, ಸ್ಫಟಿಕದ ಸಲಾಕೆ ಆಯಿತು'. ಅದು ಜನರ ಮೆಚ್ಚುಗೆಯನ್ನು ಪಡೆಯಿತು.