ಈ ಪುಟವನ್ನು ಪ್ರಕಟಿಸಲಾಗಿದೆ
19

ಅದೇ ಮೇರೆ ಬಸವಣ್ಣನು 'ಉರಿ ಬರಲಿ! ಸಿರಿ ಬರಲಿ' ನುಡಿದಂತೆ ನಡೆವ, ಕಂಡುದನು ಆಡುವ! ಇದು ಬಸವಣ್ಣನು ಪಡೆದ ಅನುವಂಶಿಕ ಸೊತ್ತು.

ಮುಂದೆ ಗುರುಹಿರಿಯರಿಂದಲೂ ಆತನು ಈ ಪಾಠಗಳನ್ನೆ ಕಲಿತನು. "ಸತ್ಯಂ ವದ!" "ಧರ್ಮ೦ ಚರ!" ಎಂದು ಬೋಧಿಸಿದರು ಗುರುಗಳು. 'ದಿಟವ ನುಡಿ, ನುಡಿದಂತೆ ನಡೆ' ಎಂಬುದು ಬಸವಣ್ಣನ ಸತ್ಯಾಚಾರವಾಯಿತು. 'ತನ್ನಂತೆ ಪರರ ಬಗೆ, ಪರಶಿವನನ್ನು ನೆನೆ' ಎಂಬುದು ಆತನ ಧರ್ಮಾಚಾರ ಆಯಿತು. ಎಳೆತನದಲ್ಲಿ ಪಡೆದ ಈ ಬೋಧೆಯು ಸುಸಂಸ್ಕೃತವಾದ ಆತನ ಹೃದಯದಲ್ಲಿ ಚೆನ್ನಾಗಿ ಬೇರೂರಿತು, ಹುಲುಸಾಗಿ ಬೆಳೆಯಿತು. ಈ ನೆಲೆಯಾಗಿ ನೆಲೆಸಿದ ಸಂಸ್ಕಾರಗಳನ್ನು ವಿರೋಧಿಸುವ ಸಂಗತಿಗಳನ್ನು ಬಸವಣ್ಣನು ಸಹಿಸುತ್ತಿರಲಿಲ್ಲ. ಅವನ್ನು ಕಂಡಾಕ್ಷಣ ಅವನ ಬುದ್ಧಿಯು ಕೆರಳುವುದು, ಹೃದಯವು ಅತಿಯಾಗಿ ಕದಡುವದು. ಅವನ ಅಂತರಂಗದಲ್ಲಿ ಅಂದು ಆಶಾಂತಿಯ ಕೋಲಾಹಲ! ಆಗವನು ತುಂಬ ವಿಚಾರಮಗ್ನನಾಗುವ. ಏನೂ ತೋಚದಂತೆ ಆಗಲು ಅವನು ಊರ ಬಳಿಯ ದೇವಾಲಯದಲ್ಲಿ ಧ್ಯಾನಮಗ್ನನಾಗಿ ಕುಳಿತುಕೊಳ್ಳುವ. ಮನಃಶಾಂತಿಯನ್ನು ಪಡೆಯಲೆತ್ನಿಸುವ.

ಬಸವಣ್ಣನ ಬುದ್ದಿಯನ್ನು ಅಂದು ತುಂಬ ಕೆರಳಿಸಿದ ಸಮಸ್ಯೆಗಳಲ್ಲಿ ಮುಂದಿನವು ಪ್ರಧಾನವಾದವುಗಳು. ಪಾಠಶಾಲೆಯಲ್ಲಿ ಗುರುಗಳು ಆತನಿಗೆ 'ದ್ಯಾವಾಭೂಮಿಂ ಜನಯನ್ ದೇವ ಏಕಃ' ಎಂಬುದನ್ನು ಕಲಿಸಿದ್ದರು. ಆದರೆ ಅವರೇ ಬ್ರಹ್ಮ-ವಿಷ್ಣು-ಮಹೇಶ್ವರರನ್ನೂ ಇಂದ್ರ-ಅಗ್ನಿ-ವಾಯು ಇತ್ಯಾದಿ ಅನೇಕ ದೇವ-ದೇವತೆಗಳನ್ನೂ ಪೂಜಿಸುತ್ತಿದ್ದರು. ಅವರ ನುಡಿ-ನಡೆಗಳಲ್ಲಿಯ ವಿರೋಧವು ಬಸವಣ್ಣನನ್ನು ಸಂದೇಹದಲ್ಲಿ ಮುಳುಗಿಸಿತು. ದೇವರು ಒಬ್ಬನೇ? ಹಲವರೇ? ಒಬ್ಬನಿದ್ದರೆ ಹಲವರ ಪೂಜೆ ಏಕೆ? ಹಲವರು ಇದ್ದರೆ "ಏಕೋ ದೇವಃ' ಎಂದು ಹೇಳುವದೇಕೆ? ಈ ಸಮಸ್ಯೆಯು ಅವನ