ಈ ಪುಟವನ್ನು ಪ್ರಕಟಿಸಲಾಗಿದೆ
21

"ಕಿಚ್ಚು ದೈವವೆಂದು ಹವಿಯನಿಕ್ಕುವರು. ಅವರ ವೇದಶಾಸ್ತ್ರ ಹೋತಿಂಗೆ ಮಾರಿಯಾಗಿಹುದು. ಕೊಲುವನು ಮಾದಿಗನಲ್ಲವೇ? ಹುಸಿವನು ಹೊಲೆಯ ಅಲ್ಲವೇ? ಸಕಲರಿಗೆ ಲೇಸ ಬಯಸುವವರೇ ಕುಲಜರಲ್ಲವೇ? ಬಸವಣ್ಣನವರ ಮನಸ್ಸು ಈ ಬಗೆಯ ಭಾವಲಹರಿಗಳ ಮೇಲೆ ಎನಿತು ಕಾಲ ವಿಹರಿಸಿತೋ? ಎನಿತು ಸಲ ಈ ಬಗೆಯಾಗಿ ವಿಹರಿಸಿತೋ?

ಬಸವಣ್ಣನು ಇಂಥ ಮನಃಸ್ಥಿತಿಯಲ್ಲಿರುವಾಗ ಬಾಗೇವಾಡಿಯಲ್ಲಿ ಒಂದು ವಿಶೇಷ ಘಟನೆಯು ಜರುಗಿತು. ಅದರಿಂದ ಬಸವಣ್ಣನ ಜೀವನದಲ್ಲಿ ಅದ್ಭುತವಾದ ಪರಿವರ್ತನವು- ಕ್ರಾಂತಿಯು ಉಂಟಾಯಿತು. ಆವರೆಗೆ ಬಸವಣ್ಣನು ಯಜ್ಞದ ವರ್ಣನೆಯನ್ನು ಕೇಳಿದ್ದ ಅದರಲ್ಲಿ ನಡೆದ ಹಿಂಸೆಯ ಕಥೆಯನ್ನು ಕೇಳಿ ಕಳವಳಗೊಂಡಿದ್ದ ಕಿಡಿಕಿಡಿಯಾಗಿದ್ದ ಹೇಸಿಕೊಂಡಿದ್ದ. ಅಂಥ ಯಜ್ಞದ ಸಮಾರಂಭವೊಂದನ್ನು ನೋಡುವ ಸಂದರ್ಭವು ಬಾಗೇವಾಡಿಯಲ್ಲಿಯೇ ಅವನಿಗೆ ಲಭಿಸಿತು. ಯಜ್ಞವು ಒಳ್ಳೆಯ ವಿಜೃಂಭಣೆಯಿಂದ ನಡೆಯಿತು. ಅಗ್ರಹಾರವು ಹಬ್ಬದ ಉತ್ಸಾಹದಿಂದ ಮೆರೆಯಿತು. ಬಸವಣ್ಣನು ಯಜ್ಞದಲ್ಲಿಯ ಎಲ್ಲ ವಿಧಾನಗಳನ್ನು ತುಂಬ ಕುತೂಹಲದಿಂದ ನಿರೀಕ್ಷಿಸಿದ. ಪಶುವಧೆಯ ದಿನ ಯೂಪಕ್ಕೆ ಕಟ್ಟಿದ ಹೋತನ್ನು ಅವನು ನೆಟ್ಟನೋಟದಿಂದ ನೋಡುತ್ತ ನಿಂತ. ಆಗ ಅದರ ಕೊಲೆಯ ನೋಟವು ಆತನ ಒಳಗಣ್ಣಿನ ಎದುರು ಅಚ್ಚೊತ್ತಿದಂತೆ ನಿಂತಿತು. ಅದು ಅವನ ಕರುಳನ್ನು ಕರಗಿಸಿತು. ಕಂಗಳಿಂದ ಕಂಬನಿಗಳನ್ನು ಸುರಿಸಿತು. ಅಷ್ಟರಲ್ಲಿ ಆ ಹೋತಿನ ಕರುಣರವವು ಆತನಿಗೆ ಕೇಳಿಸಿತು. ಕೂಡಲೇ ಆತನ ಮುಖದಿಂದ ಕೆಣಗಣ ವಚನವು ನುಸುಳಿತು:

ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು
ಎಲೆ ಹೋತೆ! ಆಳು ಕಂಡಾ!
ವೇದವನೋದಿದವರ ಮುಂದೆ ಅಳು ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ!