ಈ ಪುಟವನ್ನು ಪ್ರಕಟಿಸಲಾಗಿದೆ

22

ಬಸವಣ್ಣನ ಈ ಬಿರುನುಡಿಯನ್ನು ಕೇಳಿ, ಬಳಿಯಲ್ಲಿದ್ದ ವಿಪ್ರನು ಕಿಡಿಕಿಡಿ ಆದನು. "ಎಲೇ! ಏನು ಅಸಹ್ಯ ನುಡಿಯುತ್ತಿರುವಿ? ಅಬ್ರಹ್ಮಣ್ಯಂ! ಬಾಯಿ ಮುಚ್ಚು! ನಮ್ಮ ಈ ಯಜ್ಞದಲ್ಲಿ ಬಲಿಯಾಗಲಿರುವ ಈ ಹೋತು, ತಾನು ಸ್ವರ್ಗವನ್ನು ಏರುವದಲ್ಲದೇ, ನಮಗೆಲ್ಲ ಸ್ವರ್ಗದ ಸೌಭಾಗ್ಯವನ್ನು ಸಲ್ಲಿಸುವುದು! ಗೊತ್ತೇ? ಮರುಳನಂತೆ ಬೊಗಳಬೇಡ! ವಿಪ್ರನ ಈ ಕೋಪಾಟೋಪವು ಬಸವಣ್ಣನ ಕೋಪವನ್ನು ಕೆರಳಿಸಿತು. ಕನಿಕರವು ಅಡಗಿ ಕೋಪವು ಗುಡುಗಿತು!

"ಅಯ್ಯಾ! ಮರುಳ ನಾನಲ್ಲ ನೀವು! ಒಂದಾಡ ತಿಂಬಾತ ಹೊಂದುವಡೆ ಸ್ವರ್ಗವನು, ಎಂದೆಂದು ಆಡ ತಿಂಬುವ ಕಟುಕನು ಇಂದ್ರನಾಗಬೇಕಾದೀತು! ಖಂಡಿಸದೆ ಕರಣವನು, ದಂಡಿಸದೆ ದೇಹವನು, ಉಂಡುಂಡು ಸ್ವರ್ಗ ಸೇರಲಿಕೆ, ಅದನೇನು ರಂಡೆಯಾಳುವಳೇ? ಬಸವಣ್ಣನ ಈ ಗರ್ಜನೆಯು ಮಂಟಪದಲ್ಲಿ ಮಾರ್ದನಿಗೊಂಡು ಕೋಲಾಹಲವನ್ನೆಬ್ಬಿಸಿತು. "ದಬ್ಬರೀ ಮುಂಡೆಮಗನನ್ನ! ಎಂದು ರೇಗಿಗೆದ್ದ ವಿಪ್ರರೆಲ್ಲರು ಆತನ ಮೇಲೆ ಸಾಗಿಬಂದರು. "ಯಜ್ಞೋಪವೀತವನ್ನು ಧರಿಸಿದ ಬ್ರಾಹ್ಮಣನಾಗಿ ಈತನು ಯಜ್ಞವನ್ನು ಹಳಿವನು! ದೂಡಿರೀ ಕತ್ತೆಯನ್ನು ಇಲ್ಲಿಂದ! ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದರು. ಅದನ್ನು ಕೇಳಿ ಇಕೋ! ಕೊಳ್ಳಿರೀ ನಿಮ್ಮ ಯಜ್ಞೋಪವಿತವನ್ನು! ಅದು ಇಂಥ ಹೇಸಿ ಹಿಂಸೆಯ ಪ್ರತೀಕವಿದ್ದರೆ ಅದನ್ನು ಈಗಲೇ ಹರಿದೊಗೆವೆ! ಹೀಗೆಂದು ಬಸವಣ್ಣನು ತನ್ನ ಜನಿವಾರವನ್ನು ಹರಿದೆಸೆದು ಅಲ್ಲಿಂದ ಕೂಡಲೇ ಹೊರಟುಹೋದನು.

ಅವನು ಅಲ್ಲಿಂದ ನೇರವಾಗಿ ದೇವಾಲಯಕ್ಕೆ ತೆರಳಿದ. ಶಿವನ ಎದುರು ಕುಳಿತು ಕಂಬನಿಗರೆದ. ತನ್ನ ದುಗುಡವನ್ನು ಶಿವನಿಗೆ ಅರುಹಿದ. ಎಂದಿನಂತೆ ತನ್ನ ತಲೆ ತಿನ್ನುತ್ತಿದ್ದ ಸಂದೇಹಗಳನ್ನು ಆತನ ಎದುರು ಇರಿಸಿದ. "ದಾರಿದೋರೈ ಪ್ರಭುವೆ! ಹಾರೈಸುತಿಹ ಬಸವ! ಎಂದು ಅಂತಃಕರಣದಿಂದ ಪ್ರಾರ್ಥಿಸಿ ಧ್ಯಾನಸ್ಥನಾದ. ಕೂಡಲೇ ಮೈಮರೆತ.