ಈ ಪುಟವನ್ನು ಪ್ರಕಟಿಸಲಾಗಿದೆ
25

ಪ್ರಾತರ್ವಿಧಿಗಳನ್ನು ಮುಗಿಸಿದರು. ಬೆಳಗಾಯಿತು. ಆದರೆ ಬಸವಣ್ಣನು ಬರಲೇ ಇಲ್ಲ. ಆತನು ಶಿವಾಲಯಕ್ಕೆ ಹೋಗಿರಬಹುದೆಂದು ಬಗೆದು, ಶಿವದೇವನು ಅಲ್ಲಿ ಹೋಗಿ ನೋಡಿದ. ಅಲ್ಲಿಯೂ ಆತನಿರಲಿಲ್ಲ. ಬಸವಣ್ಣನು ಅದೆಲ್ಲಿ ಹೋಗಿರಬಹುದು? ಎಂದವರು ತುಂಬ ಯೋಚಿಸಿದರು. ಬಗೆಯು ಹರಿಯದಂತಾಯಿತು. ಹೊತ್ತು ಏರಿದಂತೆ ಅವರ ಚಿಂತೆಯೂ ಬೆಳೆಯಿತು. ಮುನ್ನಾದಿನ ಯಜ್ಞಮಂಟಪದಲ್ಲಿ ನಡೆದ ಕೋಲಾಹಲದ ನೆನಪಾಯಿತು. ಅಂದಿನ ಬಸವಣ್ಣನ ಆವೇಶದ ಮಾತು, ವಿಪ್ರರ ಕೋಪಾಟೋಪ, ಯಜ್ಞೋಪವೀತವನ್ನು ಹರಿದೆಸೆದು ಹೊರಹೊರಟ ಬಸವಣ್ಣನ ಸಂತಪ್ತ ಮೂರ್ತಿ. ಈ ನೋಟವು ಅವರ ಕಂಗಳೆದುರು ಹೊಳೆಯಿತು. ಇದರ ಜತೆಯಲ್ಲಿ 'ನೋಡಯ್ಯ, ಶಿವಸ್ವಾಮಿ! ನಿನ್ನ ಬಸವನ ಉದ್ಧಟತನವನ್ನು ಸಹಿಸುವದು ಸಾಧ್ಯವಿಲ್ಲ. ಆತನಿಗೆ ಚೆನ್ನಾಗಿ ಬುದ್ದಿ ಕಲಿಸು. ಇಲ್ಲವಾದರೆ ಅವನನ್ನು ಮನೆಯಿಂದ ಹೊರತಳ್ಳು! ನೀನು ಸುಮ್ಮನೆ ಕುಳಿತರೆ ಪರಿಣಾಮ ಸರಿಯಾಗಲಿಕ್ಕಿಲ್ಲ! ಎಂಬುದಾಗಿ ಹಲವು ವಿಪ್ರರು ಆತನಿಗೆ ಬೆದರಿಕೆಯನ್ನು ಹಾಕಿದ್ದರು. ಈ ಸಂಗತಿಗಳನ್ನೆಲ್ಲ ನೆನೆದು, ಶಿವದೇವನ ಮನಸ್ಸಿನಲ್ಲಿ ಸಲ್ಲದ ಯೋಚನೆಗಳು ತಲೆದೋರಿದವು. 'ಸಿಟ್ಟಿನ ಕೈಯಲ್ಲಿ ಬುದ್ದಿಕೊಟ್ಟು ಬಸವನು...?’ ಎಂದು ಬಗೆದು ಅವರು ಸುತ್ತಲಿನ ಬಾವಿಗಳನ್ನು ನೋಡಿ ಬಂದರು. ಅಲ್ಲಿಯೂ ಬಸವಣ್ಣನ ಸುಳಿವು ಸಿಗಲಿಲ್ಲ. 'ಅವನು ಈ ಗ್ರಾಮವನ್ನು ತೊರೆದು ಬೇರೆಡೆ ಹೋಗಿರಬಹುದು. ಆತನನ್ನು ಅರಸಲು ಆಳುಗಳನ್ನು ಕಳಿಸೋಣ. ಸುಮ್ಮನೆ ಚಿಂತಿಸಿ ಫಲವಿಲ್ಲ ಶಿವನೇ, ನಮ್ಮ ಬಸವನನ್ನು ಕಾಯಯ್ಯಾ' ಎಂದು ಬೇಡಿಕೊಂಡು, ಶಿವದೇವನು ನಾಲ್ಕೂ ನಿಟ್ಟಿನಲ್ಲಿ ಆಳುಗಳನ್ನು ಕಳುಹಿಸಿದನು. ಅಷ್ಟರಲ್ಲಿ ಬಸವಣ್ಣನ ಕೋಣೆಯಲ್ಲಿ ನಾಗಮ್ಮನಿಗೆ ಒಂದು ಕಾಗದವು ಕಾಣಿಸಿತು. ಅದನ್ನವಳು ತನ್ನ ಯಜಮಾನರಿಗೆ ತೋರಿಸಿದಳು. ಅದರಲ್ಲಿ ಮುಂದಿನ ಎರಡೇ ಸಾಲುಗಳಿದ್ದವು:

'ಸಂಗನ ಕರೆ ಕೇಳಿ ಆತನೆಡೆ ನಡೆದಿಹೆನು.
ಅಂಜದಿರಿ, ಅಳುಕದಿರಿ, ಅಳಲದಿರಿ, ಬಳಲದಿರಿ.'