ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಪ್ರಕಾಶಕರ ನಿವೇದನೆ (ದ್ವಿತೀಯ ಆವೃತ್ತಿ) ಶ್ರೀ ಜಗಜ್ಯೋತಿ ಬಸವೇಶ್ವರರು, ಅನುಭಾವ ದಾರ್ಶನಿಕರು, ಕರ್ಮಸಿದ್ಧಾಂತದ ಹರಿಕಾರರು. ಮಾನವ ಜೀವನದಲ್ಲಿ ಸಮಾನತೆಯ ಸಂಕ್ರಾಂತಿ ಪುರುಷರು. ಶ್ರೀ ಬಸವಣ್ಣನವರು ಜೀವನದ ಎಲ್ಲಾ ಆಯಾಮಗಳಿಂದಲೂ ತಾವೇ ಒಂದು ಸಂಸ್ಥೆಯಾಗಿದ್ದವರು, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗಗಳಲ್ಲಿ ಸಂಪೂರ್ಣ ಸಮನ್ವಯವನ್ನು ಸಾಧಿಸಿ ಅದ್ಭುತ ಸಾಮಾಜಿಕ ಸಾಮರಸ್ಯವನ್ನು ಕಂಡುಕೊಂಡಂಥವರು. ಈ ಸನ್ನಿವೇಶದಲ್ಲಿ ಶ್ರೀ ಬಸವೇಶ್ವರರ ಪ್ರಸ್ತುತತೆ ಅತೀ ಅವಶ್ಯಕವೆನಿಸುತ್ತದೆ. ಹಾಗಾಗಿ “ಶ್ರೀ ಬಸವಣ್ಣನವರ ದಿವ್ಯ ಜೀವನ' ಗ್ರಂಥದ ಮರು ಪ್ರಕಟಣೆಯು ಈ ನಿಟ್ಟಿನಲ್ಲಿ ನಾವಿಡುವ ಒಂದು ಹೆಜ್ಜೆಯಷ್ಟೇ. ಈ ಕೃತಿಯ ಲೇಖಕರು ದಿ|| ಶ್ರೀ ಮನೋಹರ ಶ್ರೀನಿವಾಸ ದೇಶಪಾಂಡೆಯವರು, ಪ್ರಾತಃಸ್ಮರಣೀಯ ಪೂಜ್ಯ ಗುರುದೇವ ಡಾ|| ಆರ್.ಡಿ. ರಾನಡೆಯವರ ಆಪ್ತ ಶಿಷ್ಯರಾಗಿದ್ದವರು. ದಿ|| ದೇಶಪಾಂಡೆಯವರು ಶ್ರೀ ಗುರುದೇವರ ಉತ್ತುಂಗ ಅನುಭಾವ ಹಾಗೂ ಪಾಂಡಿತ್ಯದ ವಿಶ್ವ ಮಾನ್ಯತೆಯನ್ನು ಹತ್ತಿರದಿಂದ ಕಂಡು ಅನುಭವಿಸಿದವರು, ಅಲ್ಲದೇ ಶ್ರೀ ಗುರುದೇವರ ಆದರ್ಶಕ್ಕೆ ತಕ್ಕಂತೆ ತಮ್ಮ ಜೀವನವನ್ನು ರೂಪಿಸಿಕೊಂಡು, ಅವರ ನಿರ್ದೇಶಕ ಸೂತ್ರದಂತೆ ಅನುಭಾವ ಸಾಹಿತ್ಯವನ್ನು ರಚಿಸಿದವರು. ಶ್ರೀ ಗುರುದೇವರ ವಿಚಾರಧಾರೆಯು ಈ ಗ್ರಂಥದುದ್ದಕ್ಕೂ ಅನುಸೂತವಾಗಿ ಕಾಣಸಿಗುತ್ತದೆ. ದಿವ್ಯತಮವಾದ ಅನುಭಾವದ ಭಕ್ತಿ ಸರ್ವಸಮಾನತೆಯ ಸಹಜೀವನ, ಅಂತರ್‌ ದೃಷ್ಟಿಯಿಂದ ಮಾಡಿದ ಸಮನ್ವಯ ಸೂತ್ರಗಳು ಶ್ರೀ ಬಸವೇಶ್ವರರ ಜೀವನದಲ್ಲಿ ಕಾಣಸಿಗುತ್ತವೆ. ಅವುಗಳನ್ನು ನಿಖರ ಅಭಿಪ್ರಾಯ ಹಾಗೂ ಆರ್ಷ ಸಾಹಿತ್ಯ ಮತ್ತು ಪಾಶ್ಚಾತ್ಯ ತತ್ವ-ಶಾಸ್ತ್ರಗಳ ಆಧಾರಗಳನ್ನು ನೀಡಿ ಶ್ರೀ ಗುರುದೇವರು ತೋರಿಸಿಕೊಟ್ಟ ರೀತಿಯಲ್ಲಿ ಪರಿಚಯಿಸುವಲ್ಲಿಲೇಖಕರು ಯಶಸ್ವಿಯಾಗಿದ್ದಾರೆ.