ಈ ಪುಟವನ್ನು ಪ್ರಕಟಿಸಲಾಗಿದೆ
43

ಸಂಗಮವಾಗಿತ್ತು. ಇಬ್ಬರೂ ಗದ್ಗದಿತರಾದರು. ಮುಖದಿಂದ ಮಾತು ಹೊರಬಾರದಾಯಿತು. ಒಬ್ಬರನ್ನು ಒಬ್ಬರು ಬಹುಕಾಲ ಮೌನದಿಂದ ನೋಡುತ್ತಲೇ ನಿಂತರು. ಕೊನೆಗೆ ಬಲು ಕಷ್ಟದಿಂದ ತಮ್ಮ ಮೌನವನ್ನು ತೊರೆದು ಮುನಿಗಳೆಂದರು :

“ನಡೆಯಯ್ಯ, ಮಗನೆ ! ನಡೆ, ಕಂದ ಬಸವಣ್ಣ

ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ !”


ಸದ್ಗುರುಗಳ ಆಶೀರ್ವಾದ ಪಡೆದು ಬಸವಣ್ಣ ಅಕ್ಕಭಾವಂದಿರಿಗೆ ನಮಸ್ಕಾರ ಮಾಡಿದನು. ಅವರನ್ನು ಪ್ರೀತಿಯಿಂದ ಬೀಳ್ಕೊಂಡನು. ತರುವಾಯ ಸಂಗಮೇಶನನ್ನೂ ನಂದಿಕೇಶನನ್ನೂ ಅನನ್ಯಭಾವದಿಂದ ವಂದಿಸಿ, ಸಂಗನ ಧ್ಯಾನವನ್ನು ಮಾಡುತ್ತ ಬಸವಣ್ಣನು ಮಂಗಳವಾಡಕ್ಕೆ ಪಯಣ ಬೆಳೆಸಿದನು.