ಈ ಪುಟವನ್ನು ಪ್ರಕಟಿಸಲಾಗಿದೆ
57

ಬಗೆಯಲು ಬೋಧಿಸುವದು. ಇದು ಮೊದಲನೆಯ ನಿಯಂತ್ರಣ. ತರುವಾಯ ಅದು ಋತುಗಾಲದ ರತಿಯನ್ನೇ ಪ್ರೋತ್ಸಾಹಿಸುವದು. ಇದು ಎರಡನೆಯ ನಿಯಂತ್ರಣ. ಒಂದು ಗಂಡುಮಗು ಜನಿಸಿದೊಡನೆ, ಸತಿಪತಿಯರು ರತಿಯನ್ನು ನಿಲ್ಲಿಸಿ ವಾನಪ್ರಸ್ಥರಾಗಿ ಭಗವಂತನ ಭಕ್ತಿಯಲ್ಲಿಯೋ ಹಿರಿಯರ ಸೇವೆಯಲ್ಲಿಯೋ ದೀನದಲಿತರ ಉದ್ಧಾರಕಾರ್ಯದಲ್ಲಿಯೋ ಕಾಲಕಳೆಯಲು ಶಾಸ್ತ್ರವು ಆಜ್ಞಾಪಿಸುವದು. ಇದು ಮೂರನೆಯ ನಿಯಂತ್ರಣ. ಈ ಬಗೆಯ ಸಂಯಮವನ್ನು ತಮ್ಮ ಜೀವನದಲ್ಲಿ ಬಳಸಿದ ಭಾಗ್ಯಶಾಲಿಗಳು ಬಸವಣ್ಣನವರು. ಗಂಗಾದೇವಿಗೂ ತರುವಾಯ ನೀಲಲೋಚನೆಗೂ ಒಬ್ಬನೇ ಒಬ್ಬ ಮಗ ಹುಟ್ಟಿದೊಡನೆ, ಅವರು ಸಹ ಬ್ರಹ್ಮಚರ್ಯವನ್ನು ಪಾಲಿಸಿದಂತೆ ಕಾಣುವದು. ಅದಕ್ಕಾಗಿ ಅವರನ್ನು ಬ್ರಹ್ಮಚಾರಿ ಎಂದೂ ಕೆಲ ಹಿರಿಯ ಶರಣರು ಕರೆದಿರುವರು. ಪ್ರಭುದೇವರು ಬಸವಣ್ಣನವರನ್ನು ಕುರಿತು ಅರುಹಿರುವುದೇನೆಂದರೆ:
ಸತಿಯ ಕಂಡು ಬ್ರತಿಯಾದ ಬಸವಣ್ಣ !
ಬ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ!
ಬ್ರಹ್ಮಚಾರಿಯಾಗಿ ಭವಗೆಟ್ಟನಯ್ಯಾ ಬಸವಣ್ಣ
ಗುಹೇಶ್ವರಾ ! ನಿಮ್ಮಲ್ಲಿ ಬಾಲಬ್ರಹ್ಮಚಾರಿಯಾದಾತ ಬಸವಣ್ಣ!
ಬಸವಣ್ಣನವರ ಪತ್ನಿಯರು ಬರೀ ಪತ್ನಿಯರಾಗಿಯೇ ಉಳಿಯಲಿಲ್ಲ. ಅವರು ಬಸವಣ್ಣನವರ ಶಿಷ್ಠೆಯರೂ ಆಗಿದ್ದರು. ಬಸವಣ್ಣನವರೊಡನೆ ಭಕ್ತಿಸಾಧನದಲ್ಲಿ ನಿರತರಾಗಿ, ಅವರು ಪರಮಾರ್ಥದಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದರು. ನೀಲಲೋಚನೆಯ ಮುಂದಿನ ವಚನವು ಇದರ ಉತ್ತಮವಾದ ನಿದರ್ಶನ.
ಆದಿ ಅನಾದಿ ತತ್ತ್ವವ ಭೇದಿಸಿಕೊಟ್ಟ ಗುರುವೇ !
ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೇ !
ಅಕಾರ ಉಕಾರ ಮಕಾರ ಕಳೆಯನರುಹಿಕೊಟ್ಟ ಗುರುವೇ !
ಇಷ್ಟಪ್ರಾಣ-ಭಾವವದೆಂದು ತೋರಿದ ಗುರುವೇ !