ಈ ಪುಟವನ್ನು ಪ್ರಕಟಿಸಲಾಗಿದೆ

8

ಪ್ರಕಾಶಕರ ನಾಲ್ಕು ಮಾತು
(ಪ್ರಥಮ ಆವೃತ್ತಿ)

ಶ್ರೀ ಬಸವಣ್ಣನಂಥವರ ಜೀವನ ನಿತ್ಯ ಬೆಳಗುವ ಅಮರಜ್ಯೋತಿಯಂತೆ. ಅವರ ಸಂದೇಶ ಹಗಲಿರುಳು ಹೊಳೆಯುವ ಬೆಳಕಿನಂತೆ.

ಮನುಷ್ಯ ಮೈವೆತ್ತು ನಿಂತ ಚಿತ್‌ಶಕ್ತಿ, ದಿನರಾತ್ರಿ, ಬೆಳಕು ಕತ್ತಲೆ, ಸುಖದುಃಖ, ಶೀತ ಉಷ್ಣ ರಾಗದ್ವೇಷ, ಹುಟ್ಟು ಸಾವು ಎಂಬ ದ್ವಂದ್ವಗಳು ಅವನನ್ನು ಆವರಿಸಿಕೊಂಡಿರುವವು. ಅವುಗಳ ಬಾಧೆಯಿಂದಾಚೆಗೆ ಹೋಗಬೇಕೆಂಬುದೇ ಅವನ ಸತತ ಹವಣು-ಹಂಬಲ, ಅವುಗಳ ಆಚೆಗೆ ಹೋದವನೇ ದ್ವಂದ್ವಗಳನ್ನು ಗೆದೆಯಬಲ್ಲನು; ಗೆದ್ದು ಎರಡನ್ನೂ ಆಳಬಲ್ಲನು; ಸುಖದುಃಖಗಳೆರಡೂ ಆಟನೋಟಗಳೆಂದು ಎಣಿಸಿ ಆನಂದಿಸಬಲ್ಲನು. ಅವನೇ ಸಿದ್ದನು. ಅವನೇ ಆರೂಢನು. ಅವನೇ ಸಿದ್ಧಾರೂಢನು.

ಶ್ರೀ ಬಸವಣ್ಣನವರು ಅಂಥ ಜೀವಜ್ಯೋತಿಗಳಲ್ಲಿ ಒಬ್ಬರು. ತಾವು ಬರೀ ದೇಹ-ಜೀವ ಅಲ್ಲ. ತಾವು ದೇಹಧಾರಿಯಾಗಿದ್ದರೂ ಪರಾತ್ಪರ ಚಿತ್‌ಶಕ್ತಿಯ ಒಂದು ಕಣ. ಅದನ್ನರಿತು, ದೇಹ-ಜೀವಗಳನ್ನು ಮರೆತು, ಜ್ಞಾನ-ಭಕ್ತಿ-ಕ್ರಿಯೆ ಎಂಬ ಯೋಗತ್ರಯವನ್ನು ಸಾಧಿಸಿ, ಪರಶಿವಸಮಾಧಿ ಯನ್ನು ಗೈದು ಅಮರಪದವನ್ನು ಪಡೆದು ಮೃತ್ಯುಲೋಕದ ವ್ಯವಹಾರಿಕರಿಗೆ ದಾರಿತೋರಲು ಬಂದ ಕಾರಣಪುರುಷರವರು. ಅವರ ಸ್ಮರಣ ಪಾವಕ, ಅವರ ಜೀವನ ಸ್ಪೂರ್ತಿದಾಯಕ, ಅವರ ಉಪದೇಶ ಉದ್ಧಾರಕ.

ಶ್ರೀ ಬಸವಣ್ಣನವರ ಅಷ್ಟಶತಸಾಂವತ್ಸರಿಕ ಉತ್ಸವದ ಸಂದರ್ಭದಲ್ಲಿ ಅವರ ದಿವ್ಯಜೀವನದ ನೆನಪನ್ನು ಮಾಡಿಕೊಳ್ಳಬೇಕೆಂಬ ಸಂಕಲ್ಪದಿಂದ ಲೋಕ ಶಿಕ್ಷಣ ಮಾಲೆಯು ಈ ಚಿಕ್ಕ ಪುಸ್ತಕದ ಪ್ರಕಟನೆಯ ನಮ್ರ ಕಾರ್ಯವನ್ನು ಕೈಕೊಂಡಿತು. ಆಧ್ಯಾತ್ಮಿಕ ಗ್ರಂಥಲೇಖನ- ಪ್ರಕಟನೆಯ ಕೆಲಸದಲ್ಲಿ ಪಳಗಿದ ಕೈ, ಎಂದು ಪ್ರಸಿದ್ಧರಾದ ಅಥಣಿಯ ಶ್ರೀ ದೇಶಪಾಂಡೆ ಮನೋಹರರಾಯರು ಮಾಲೆಯ ಮಾತಿಗೆ ಮನ್ನಣೆ ಕೊಟ್ಟರು. ಅವರ ಸವಿಯಾದ ಫಲ ಈ ಪುಸ್ತಿಕೆ.