ಇದೇ ಸಮಯದಲ್ಲಿ ಬಸವಣ್ಣನವರು ಕೆಲ ಪವಾಡಗಳನ್ನು
ಮೆರೆದರು. ಅದರ ಮೂಲಕ ಜನರಲ್ಲಿ ಅವರ ಬಗೆಗೆ ಭಕ್ತಿಭಾವವು
ಬೆಳೆಯಿತು. ಬಿಜ್ಜಳರಾಯನಲ್ಲಿಯೂ ಅವರ ಬಗೆಗೆ ಭೀತ್ಯಾದರಗಳು
ಬೆಳೆದವು. ಆದರೆ ಈ ಪವಾಡಗಳಿಂದ ಅವರ ಅಹಂಕಾರ ಬೆಳೆಯಿತು.
ಅದರ ಅರಿವು ಉಂಟಾಗಲು ಬಸವಣ್ಣನವರು ಎಂಬತ್ತೆಂಟು ಪವಾಡವ
ಮೆರೆದು, ಹಗರಣದ ಚೋಹದಂತಾಯಿತ್ತು ಎನ್ನ ಭಕ್ತಿ! ಎಂಬುದಾಗಿ
ತುಂಬ ಕಳವಳಗೊಂಡರು. ಮತ್ತು ಅವನ್ನು ತೊರೆದು ಅವರು ಶಿವನ
ಬಯಕೆಯಂತೆ ನಡೆಯತೊಡಗಿದರು. ಬರಬರುತ್ತ ಬಸವಣ್ಣನವರಲ್ಲಿ
'ಸರ್ವಂ ಶಿವಮಯಂ ಜಗತ್' ಎಂಬ ಭಾವನೆ ಬೆಳೆಯಿತು. ಅದರ
ಒಂದೆರಡು ನಿದರ್ಶನಗಳನ್ನು ಮುಂದಿನ ಸನ್ನಿವೇಶಗಳಲ್ಲಿ
ಕಾಣಬಹುದು :
ಒಂದು ದಿನ ಕಳ್ಳನೋರ್ವನು ಬಸವಣ್ಣನವರ ಪತ್ನಿಯ
ಆಭರಣಗಳನ್ನು ಕದಿಯಲು ಬಂದನು. ಕಳ್ಳನು ಅವನ್ನು ಸೆಳೆಯುತ್ತಿರಲು,
ಆಕೆ ನಿದ್ದೆಯಲ್ಲಿ ಕೈ ನೀಡಿದಳು. ಅದು ತಾಗಿದ್ದರಿಂದ ಬಸವಣ್ಣನವರು
ಎಚ್ಚತ್ತರು. ಆಗ ಕಳ್ಳ ಬಂದುದು ಅವರಿಗೆ ಗೊತ್ತಾಯಿತು. ಪತ್ನಿಯ ಕೈ
ತಗಲಿದ ಮೂಲಕ ತನಗೆ ನೋವಾದಂತೆ, ಕಳ್ಳನಿಗೂ
ನೋವಾಗಿರಬಹುದು ಎಂದು ಭಾವಿಸಿ, ಅವರು ಹೀಗೆಂದರು :
ಒಡನಿರ್ದ ಸತಿಯೊಂದು ನಚ್ಚಿರ್ದೆನಯ್ಯಾ,
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ,
ಅಯ್ಯೋ ! ನಮ್ಮಯ್ಯನ ಕೈ ನೊಂದಿತು
ತೆಗೆದುಕೊಡಾ, ಎಲೆ ಚಂಡಾಲಗಿತ್ತಿ !
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ
ಕೂಡಲಸಂಗಮನಲ್ಲದೇ ಮತ್ತಾರು ಅಲ್ಲ.
ಮತ್ತು ಕಳ್ಳನಿಗೆ ಅವರು ಆಭರಣಗಳನ್ನು ತೆಗೆಯಿಸಿಕೊಟ್ಟರು. ಅದರಿಂದ
ಕಳ್ಳನಲ್ಲಿಯೂ ಉಪರತಿಯುಂಟಾಯಿತು. ಅವನು ಅನುತಾಪ
ಪಟ್ಟುಕೊಂಡು ಬಸವಣ್ಣನವರ ಭಕ್ತನಾದ.
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೦
ಈ ಪುಟವನ್ನು ಪ್ರಕಟಿಸಲಾಗಿದೆ
61