ಈ ಪುಟವನ್ನು ಪ್ರಕಟಿಸಲಾಗಿದೆ

62
ಇನ್ನೊಂದು ದಿನ, ಬಸವಣ್ಣನವರ ಆಕಳುಗಳು ಮೇಯಲು ಅಡವಿಗೆ ಹೋದಾಗ, ಕಳ್ಳರು ಅವನ್ನು ಅಪಹರಿಸಿಕೊಂಡು ಹೋದರು. ಗೋಪಾಲಕರು ಮನೆಗೆ ಬಂದು ನಡೆದ ಸಂಗತಿಯನ್ನು ಬಸವಣ್ಣನವರಿಗೆ ಅರಿಕೆ ಮಾಡಿದರು. ಆಗ ಬಸವಣ್ಣನವರು ಅವರಿಗೆ ಈ ರೀತಿ ಬೋಧಿ ಸಿದರು :
ಆಕಳ ಕಳ್ಳರು ಕೊಂಡೊಯ್ದರು
ಎನ್ನದಿರಿಂ ಭೋ ನಿಮ್ಮ ಧರ್ಮ !
ಬೊಬ್ಬಿಡದಿರಿಂ ಭೋ ನಿಮ್ಮ ಧರ್ಮ !
ಆಡದಿರಿಂ ಭೋ ನಿಮ್ಮ ಧರ್ಮ !
ಅಲ್ಲಿ ಉಂಬರೆ ಸಂಗ, ಇಲ್ಲಿ ಉಂಬರೆ ಸಂಗ,
ಕೂಡಲಸಂಗಮದೇವಾ ಏಕೋಭಾವ !
ಆದುದರಿಂದ ನೀವೆಲ್ಲರು ಅವುಗಳ ಕರುಗಳನ್ನು ಆಕಳು ಹೋದ ದಾರಿಯಲ್ಲಿ ಬಿಟ್ಟು ಬರಬೇಕು ಎಂದು ಹೇಳಿ ಬಸವಣ್ಣನವರು ಕರುಗಳನ್ನು ಅವರೊಡನೆ ಕಳುಹಿದರು. ಈ ಅಲೌಕಿಕ ನಡತೆಯನ್ನು ಕಂಡು ಕಳ್ಳರಲ್ಲಿಯೂ ಉಪರತಿ ಉಂಟಾಗಿ ಅವರೂ ಬಸವಣ್ಣನವರ ಭಕ್ತರಾದರು.