ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ : ಐದು

ಅನುಭವ ಮಂಟಪ

ಪ್ರಜಾಸೇವೆ :
ಬಸವಣ್ಣನವರು ದಂಡಾಧಿಪರಾದೊಡನೆ ಹಾಗೂ ಪ್ರಧಾನಮಂತ್ರಿಗಳು ಆದೊಡನೆ ಅವರು ತಮ್ಮ ಪ್ರಜೆಗಳ ಕಲ್ಯಾಣದ ಕಾರ್ಯದಲ್ಲಿ ತೊಡಗಿದರು. ಅವರು ಮೊದಲಿನಿಂದಲೂ ನುಡಿದಂತೆ ನಡೆದವರು, ನ್ಯಾಯನಿಷ್ಠುರರು, ನಿಃಸ್ಪೃಹರು. ಅವರು ಯಾರ ದಾಕ್ಷಿಣ್ಯಕ್ಕೂ ಒಳಗಾಗದವರು. 'ತನ್ನಂತೆ ಪರರು' ಎಂಬುದು ಅವರ ಇನ್ನೊಂದು ಮನೋಭಾವನೆ. ಅದರ ಮೂಲಕ ಬಸವಣ್ಣನವರು ಪ್ರಜೆಗಳ ನೋವು-ನಲಿವುಗಳಲ್ಲಿ ಸಹಜವಾಗಿ ಬೆರೆಯಬಲ್ಲವರಾದರು, ಪ್ರಜೆಗಳ ನೋವನ್ನು ಅಳಿಸಿ, ನಲಿವನ್ನು ಬೆಳೆಸಬಲ್ಲವರಾದರು. ಸಂಗನ 'ರಾಜತೇಜ'ವು ಅವರಲ್ಲಿ ನೆಲೆಸಿದುದರಿಂದ ಅವರು ತಮಗೆ ಸರಿ ತೋರಿದುದನ್ನು ನೆರವೇರಿಸಲು ಯಾರಿಗೂ ಅರಸನಿಗೂ ಕೂಡ ಹೆದರುತ್ತಿರಲಿಲ್ಲ. ಅವರು ತಮ್ಮನ್ನು ಕುರಿತು ಒಂದೆಡೆ ಹೇಳಿರುವುದೇನೆಂದರೆ :
ನ್ಯಾಯನಿಷ್ಟುರಿ; ದಾಕ್ಷಿಣ್ಯಪರನು ನಾನಲ್ಲ
ಲೋಕವಿರೋಧಿ; ಶರಣನಾರಿಗಂಜುವನಲ್ಲ.
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪರಾಗಿ,

ಅವರು ಸಂಗನ 'ರಾಜತೇಜ' ಪಡೆದವರು, ನಿರ್ಭಯರು, ನಿರ್ದಾಕ್ಷಿಣ್ಯರು, ನ್ಯಾಯನಿಷ್ಟುರರು, ಲೋಕವಿರೋಧಿಗಳು. ಲೋಕಾಯುತರ ನಾಸ್ತಿಕತೆಯನ್ನು ಭೌತಿಕತೆಯನ್ನು ವಿರೋಧಿಸುವವರು. ಪ್ರಜೆಗಳ ನೈಜ ಕಲ್ಯಾಣಕ್ಕಾಗಿ ಹೆಣಗುವವರು.
ಬಸವಣ್ಣನವರು 'ಪರಮ ಪುರುಷಾರ್ಥಿಗಳು' ಅವರು ಪರಮಾತ್ಮನ ಸಾಕ್ಷಾತ್ಕಾರರೂಪಿಯಾದ ಪರಮಪುರುಷಾರ್ಥವನ್ನು ಪಡೆದವರು.