ಈ ಪುಟವನ್ನು ಪ್ರಕಟಿಸಲಾಗಿದೆ
69

ಹಿರಿಯರದು, 'ಮನೆ ನೋಡಾ ಬಡವರು, ಮನ ನೋಡಾ ಘನ, ಅವರು ಸ್ವತಂತ್ರರು ಧೀರರು.'

ಈ ಬಗೆಯ ಉನ್ನತವಿಚಾರಗಳ ಪ್ರಚಾರದಿಂದ ಪ್ರಜೆಗಳಲ್ಲಿ ಸೌಹಾರ್ದ, ಸ್ವಾವಲಂಬನೆ, ಸಮಾಧಾನ, ಭಕ್ತಿ, ಶಾಂತಿಗಳನ್ನು ನೆಲೆಗೊಳಿಸಲು ಬಸವಣ್ಣನವರು ಯತ್ನಿಸಿದರು. ಏಕೆಂದರೆ ಅಂತರಂಗದ ಸುಧಾರಣೆಯೇ ಬಹಿರಂಗದ ಸುಧಾರಣೆಯ ತಳಹದಿ ಎಂಬ ಮಹಾಸಿದ್ದಾಂತವನ್ನು ಅವರು ಚೆನ್ನಾಗಿ ಬಲ್ಲರು. ಮಂಗನನ್ನು ಸಿಂಗರಿಸಿ ಏನು ಪ್ರಯೋಜನ? ಅದರಿಂದ ಮಂಗವು ಮಾನವ ಆಗಬಲ್ಲುದೇ? ಈ ಆಂತರಿಕ ಬದಲಾವಣೆಗಳ ಜತೆಯಲ್ಲಿ ಅವರು ಕೆರೆ ಕಾಲುವೆಗಳನ್ನು ನಿರ್ಮಿಸಿ, ಕೃಷಿಗೆ ಪ್ರೋತ್ಸಾಹವನ್ನು ಕೊಟ್ಟು ಚಿಕ್ಕ ಚಿಕ್ಕ ಉದ್ಯಮಗಳನ್ನು ಪ್ರಚುರಗೊಳಿಸಿ, ಅವನ್ನು ಜನರಿಗೆ ಕಲಿಸುವ ಏರ್ಪಾಡನ್ನು ಮಾಡಿ, ಕೈಗಾರಿಕೆಗಳಿಗೆ ಪ್ರೋತ್ಸಾಹವನ್ನು ನೀಡಿದರು. ಸರಿಯಾದ ನ್ಯಾಯ ದಾನವನ್ನು ಸಕಾಲಕ್ಕೆ ಸಲ್ಲಿಸಿ, ಅಪರಾಧಿಗಳನ್ನು ಕೂಡಲೇ ಕಂಡುಹಿಡಿದು, ದಂಡಿಸಿದ ಮೂಲಕ, ಅವರು ಸಮಾಜದಲ್ಲಿ ಸ್ವಾಸ್ಥ್ಯವನ್ನು ನೆಲೆಗೊಳಿಸಿದರು. ಇವೆಲ್ಲವುಗಳ ಫಲವಾಗಿ ಪ್ರಜೆಗಳಲ್ಲಿ ಸಮೃದ್ಧಿ-ಸುಖಶಾಂತಿಗಳು ನೆಲೆಸಿದವು. ಇವನ್ನೆಲ್ಲ ಬಸವಣ್ಣನವರು ಧರ್ಮಭಾವನೆಯನ್ನು ಜಾಗೃತಗೊಳಿಸಿ, ಅದರ ತಳಹದಿಯ ಮೇಲೆಯೇ ನಿಲ್ಲಿಸಲು ಯೋಚಿಸಿದರು, ಯತ್ನಿಸಿದರು. ಅದರಿಂದಲೆ ಅವರಿಗೆ ಕೆಲಮಟ್ಟಿಗೆ ಯಶಸ್ವಿ ಲಭಿಸಿತು. ಇದೇ ಭಾರತೀಯ ಹಿರಿಯರ ಸನಾತನ ರೀತಿ.
ಜಂಗಮಾರಾಧನೆ :
ಗುರುಕಾರುಣ್ಯವಾಗಿ, ಹಸ್ತಮಸ್ತಕ ಸಂಯೋಗವಾದ ಬಳಿಕ,
ಗುರು ಲಿಂಗ ಜಂಗಮವೆ ಗತಿಯಾಗಿದ್ದೆ ಕಾಣಾ.
ಎಂಬುದಾಗಿ ಬಸವಣ್ಣನವರು ತಮ್ಮ ಆರಾಧ್ಯ ದೈವತದ ಸ್ವರೂಪವನ್ನು ಅರುಹಿ ಇರುವರು. ಗುರು-ಲಿಂಗ-ಜಂಗಮ ಇವು ಪರಮಾತ್ಮನ ಮೂರು ಪ್ರತೀಕಗಳು. ಗುರುವಿಗೆ ಅವರು ತಮ್ಮ ತನುವನ್ನು