ಈ ಪುಟವನ್ನು ಪ್ರಕಟಿಸಲಾಗಿದೆ



೩೪

ಕರ್ಣಾಟಕ ಚ೦ದ್ರಿಕೆ.


ಮುಖವು ಕೆಂಪೇರಿತು. ಕಣ್ಣಾಲಿಗಳು ಗರಗರನೆ ತಿರುಗತೊಡಗಿದವು.
ಅವಳು ಒಡನೆಯೇ ಹಸಿದ ಹೆಣ್ಣುಹುಲಿಯಂತೆ ಎದ್ದುನಿಂತು " ಎಲಾ,
ವೃದ್ದನೇ ! ಈ ನಿನ್ನ ಕರ್ಣಕಠೋರವಾದ ಮಾತುಗಳನ್ನು ನಿಲ್ಲಿಸು. ವಯೋ
ವೃದ್ಧನಾದ ನೀನು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಹೀಗೆ ಮಾತ
ನಾಡಬಾರದು. ನನ್ನನ್ನು ಕಳ್ಳತನದಿಂದ ಇಲ್ಲಿಗೆ ಅಪಹರಿಸಿಕೊಂಡು
ಬಂದಿರುವ ವಿಷಯವನ್ನು ನಮ್ಮ ತಂದೆಯು ಕೇಳಿದ ಪಕ್ಷದಲ್ಲಿ ನಿನ್ನ ತಲೆ
ಯನ್ನು ಚೆಂಡಾಡದೆ ಬಿಡುವುದಿಲ್ಲ. ಈಗಲಾದರೂ ನನ್ನನ್ನು ನಮ್ಮ
ತಂದೆಯಬಳಿಗೆ ಕರೆದುಕೊಂಡುಹೋಗಿ ಬಿಟ್ಟು ಸೌಖ್ಯವಾಗಿ ಬಾಳು "
ಎಂದು ನುಡಿದಳು.
ವೃದ್ದನು ಹುಸಿನಗೆಯನ್ನು ತೋರುತ್ತೆ " ಎಲೆ ಬಾಲೆ ! ನೀನು
ನನ್ನನ್ನು ಬಯ್ದರೂ ನನಗೆ ಕೋಪವುಂಟಾಗುವುದಿಲ್ಲ. ನೀನು ನನಗೆ
ಆಜ್ಞಾಪಿಸುವ ಕಾರ್ಯಗಳನ್ನೆಲ್ಲ ನೆರವೇರಿಸುವುದಕ್ಕೆ ಸಿದ್ದನಾಗಿರುವೆನು.
ನನ್ನನ್ನು ವೃದ್ದನೆಂದು ಭಾವಿಸಬೇಡ. ವೃದ್ಧನ ವೇಷವನ್ನು ಧರಿಸಿರುವೆನೇ
ಹೊರ್ತು ನಿಶ್ಚಯವಾಗಿಯೂ ವೃದ್ದನಲ್ಲ. ಈಗ ನೋಡು " ಎಂದು
ತಾನು ಧರಿಸಿದ್ದ ಕೃತ್ರಿಮಶ್ಮಶ್ರುವನ್ನೂ ಜೀರ್ಣವಾಗಿದ್ದ ವಸ್ತ್ರಗಳನ್ನೂ
ತೆಗೆದುಹಾಕಿ ಯುವತಿಯ ಇದಿರಲ್ಲಿ ನಿಂತನು.
ಪಾಠಕ ಮಹಾಶಯ ! ಇವನನ್ನು ನೀವು ಹಿಂದೆ ಯಾವಾಗಲಾದರೂ
ನೋಡಿದ್ದಿರಾ? ಕಿಂಶುಕಾಟವಿಯ ಮಾರ್ಗದಲ್ಲಿ ವಿಜಯವರ್ಮನನ್ನು ಬಂಧಿ
ಸಿದ್ದವನು ಇವನೇ ಅಲ್ಲವೆ? ಕಮಲಕುಮಾರಿಯನ್ನು ವಂಚಿಸಿ ಅವಳಿ೦ದ
ವಾಗ್ದಾನವನ್ನು ಪಡೆದವನಿವನೇ ಅಲ್ಲವೆ ? ಆ ಕೂರಕರ್ಮಿಯಾದ
ಸಂತಾಪಕನಿವನೇ ಅಲ್ಲವೆ ? ಇವನೊಡನೆ ಮಾತನಾಡುತ್ತಿದ್ದ ಮತ್ತೊಬ್ಬನು
ಇವನ ಮಿತ್ರ. ಅವನ ಹೆಸರು ಭುಜ೦ಗಮ. ನಂದಕುಮಾರಮಿತ್ರನಂತೆ
ಅವನೂ ಸಂತಾಪಕನ ಅನುವರ್ತಿಯಾಗಿದ್ದನು. ಇಬ್ಬರೂ ಸಮಾನ ವಯ
ಸ್ಕರೇ ಆಗಿದ್ದರೂ ಭುಜಂಗಮನು ವಯಸ್ಸು ಮೀರಿದವನಂತೆ ಕಾಣಿಸಿಕೊಳ್ಳು
ತ್ತಿದ್ದನು. ಭುಜಂಗಮನಿಗೆ ಸಂತಾಪಕನ ವಿಷಯದಲ್ಲಿ ಪ್ರೀತಿಗಿಂತ ಭೀತಿಯೇ
ಹೆಚ್ಚಾಗಿದ್ದಿತು. ಆ ಯುವತಿಯು ಸಂತಾಪಕನನ್ನು ತಿರಸ್ಕರಿಸಿ ಮಾತಾಡಿ
ದುದನ್ನು ನೋಡಿ ಅವನಿಗೆ ಬಹಳ ಆಶ್ಚರ್ಯವೂ ಭಯವೂ ಉಂಟಾಯಿತು.