ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩

                        ೧೭.ಮೊಳೆ ರೋಗ

ಪೀಠಿಕೆ

  ನಮ್ಮ ದೇಹದ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆಗಳಿಗೆ ಆಹಾರ ಪದಾರ್ಥಗಳ ಸೇವನೆ ಅತ್ಯಾವಶ್ಯಕ.ಆಹಾರ ಸೇವಿಸುವ ಕಾರ್ಯ,ನಮ್ಮ ಶರೀರದ ಇತರ ಕಾರ್ಯ ಕಲಾಪಗಳಿಗೆ ಹೋಲಿಸಿದಾಗ ಸುಲಲಿತವಾಗಿಯೇ ಜರುಗುತ್ತದೆಂದು ಹೇಳಬಹುದು.ಅದರಲ್ಲೂ ಅಹಾರ ವಸ್ತುಗಳು ರುಚಿಕರವಾಗಿದ್ದರಂತೂ ನಾವು ಕಂಠ ಪೂರ್ತಿ ಉಣ್ಣುತೇವೆ.ಆದರೆ ದಿನವೆಲ್ಲಾ ಹಲವಾರು ಬಾರಿ ಸೇವಿಸಿದ ಆಹಾರ ವಿಶಾಲವಾದ ಜೀರ್ಣಾಂಗ ಮಂಡಲದೊಳಗೆ ಸಂಚರಿಸಿ,ಪಚನವಾಗಿ ಉಳಿದ ಶಿಲುಕು ಮಲದ ಸ್ವರೂಪದಲ್ಲಿ ವಿಸರ್ಜನೆಯಾಗುವುದು,ಅತ್ಯಂತ ಕುತೂಹಲಕರ ಹಾಗೂ ಜಟಿಲವಾದ ಕಾರ್ಯವೇ ಸರಿ.ಆಹಾರ ವಸ್ತುಗಳು ನಾವು ಭುಂಜಿಸಿದಷ್ಟೆ ಸರಾಗವಾಗಿ ವಿಸರ್ಜನೆಯಾಗುವುದಿಲ್ಲವೆಂಬುದು ಎಲ್ಲರ ಅನುಭವವೆನ್ನುವುದರಲ್ಲಿ ಸಂದೇಹವಿಲ್ಲ.ಮಲಬದ್ಧತೆ ಮತ್ತೆ ಅದರಿಂದ ಉದ್ಭವಿಸುವ ಸಮ್ಯಸೆಗಳು ಈಗ ಮಾನವರೆಲ್ಲರ ಮಾನಸಿಕ ಹಾಗೂ ದೈಹಿಕ ವ್ಯಾಕುಲತೆಯ ಕಾರಣಗಳಾಗಿವೆ.ಒಂದು ದಿನ ಮಲ ವಿಸರ್ಜನೆಯಾಗದಿದ್ದರೆ ಪ್ರಪಂಚವೇ ತಲೆಕೆಳಗಾದಂತೆ ಗಾಬರಿ ಪಡುವವರಿರುತ್ತಾರೆ;ಅದೇ ನಾಲ್ಕಾರು ಸಾರಿ ಆದರೆ ಸುಸ್ತಾಯಿತೆಂದು ಹಾಸಿಗೆ ಹಿಡಿಯುವವರೂ ಕಡಿಮೆ ಇಲ್ಲ.ಇನ್ನು ಮಲದ್ವಾರದ ಸನಿಹದಲ್ಲಿ ರಕ್ತ,ಕೀವು ಸುರಿದರೆ ತಾವು ಭಯಂಕರ ಅನಾಹುತಕ್ಕೆ ಸಿಲುಕಿದ್ದೇವೆಂದು ಗಾಬರಿ ಪಟ್ಟುಕೊಳ್ಳುವವರೆಷ್ಟೋ ಮಂದಿ.ಜೀರ್ಣಾಂಗಗಳ ಕಡೆಯ ಭಾಗದ ಪ್ರಸ್ತಾಪ ಕೆಲವರ ಮನಸ್ಸಿನಲ್ಲಿ ಅಸಹ್ಯಕರ ಭಾವನೆಯನ್ನುಂಟುಮಾಡುತ್ತದೆ. ಅಲ್ಲಿಯ ಆಗುಹೋಗುಗಳು ವ್ಯಕ್ತಿಯ ಮಾನಸಿಕ ಸಮತೋಲನವನ್ನೇ ಏರುಪೇರು ಮಾಡಬಹುದು.ಕೆಲವರ ಮೂಲ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಈ ಭಾಗ ಪ್ರಮುಖ ಪಾತ್ರ ವಹಿಸುತ್ತದೆಂದರೂ ತಪ್ಪಾಗಲಾರದು.ಬಹುಶಃ ಇದರಿಂದಲೇ ಈ ವಲಯದಲ್ಲಿ ಉದ್ಭವವಾಗುವ ಕಾಯಿಲೆಗಳನ್ನೆಲ್ಲಾ ಸಾರಾಸಗಟಾಗಿ "ಮೂಲವ್ಯಾಧಿ"ಗಳೆನ್ನುತ್ತಾರೆ!