ಈ ಪುಟವನ್ನು ಪರಿಶೀಲಿಸಲಾಗಿದೆ

೨೦೨ ಸಾಮಿ ಅಪರಂಪಾರ

"ಹೊಸ ದಿವಾನರನ್ನು ನೇಮಿಸಬೇಡ. ಇನ್ನು ಅಂಥ ಹುದ್ದೆಗಳ ಅಗತ್ಯವಿಲ್ಲ."

ವ್ಯವಸಾಯ ತಜ್ಞರು ಕೊಡಗಿಗೆ ಭೇಟಿ ಕೊಟ್ಟರು. ಕಾಫಿತೋಟಗಳ ಸ್ತಾಪನೆಗೆ ಇದು ಯೋಗ್ಯ ತಾಣ ಎಂದರು. ಆದರೆ ತೋಟಗಳಲ್ಲಿ ದುಡಿಯಲು ಆಳುಗಳು ಬೇಕು.

ಕೊಡಗಿನ ಸರಕಾರ ಗುಲಾಮ ಪದ್ಧತಿಯನ್ನು ತೊಡೆದು ಹಾಕಿತು. 'ಸ್ವತಂತ್ರ'ರಾದ ಗುಲಾಮರು ಆಂಗ್ಲ ದೊರೆಗಳ ಕಾಫಿ ತೋಟಗಳಲ್ಲಿ ದುಡಿಯಲು ಸಿದ್ಧವಾದರು. ಘಟ್ಟದ ಕೆಳಗಿನ ಜನ ತಾವೂ ಬರುವೆವೆಂದರು.

...ಕರ್ನಲ್ ಕಬ್ಬನ್ ಹದಿನಾಲ್ಕು ವರ್ಷಗಳ ಕಾಲ ಮೈಸೂರು ರಾಜ್ಯದ ಮುಖ್ಯ ಆಡಳಿತಗಾರನಾಗಿ ಭದ್ರಮುಷ್ಟಿಯಿಂದ ಆಳಿ, ಲಾರ್ಡ್ ಬಿರುದಾಂಕಿತನಾಗಿ, ಸಾವಿರದ ಎಂಟುನೂರ ಅರುವತ್ತೊಂದರಲ್ಲಿ ಬೆಂಗಳೂರಿನಿಂದ ತೆರಳಿದ.

ಬಳಿಕ ಬಂದವನು ಬೌರಿಂಗ್. ಅವನು ಅಧಿಕಾರ ಸ್ವೀಕರಿಸಿದ ಐದನೆಯ ವರ್ಷ ಮುಮ್ಮಡಿ ಕೃಷ್ಣರಾಜ ಒಡೆಯನಿಗೆ ಪುನಃ ರಾಜ್ಯದ ಆಡಳಿತವನ್ನು ಒಪ್ಪಿಸಬೇಕೆಂದು ಇಂಗ್ಲಿಷ್ ಸರಕಾರ ತೀರ್ಮಾನಿಸಿತು.

ಯುವಕ ಮಹಾರಾಜನನ್ನು ರಟ್ಟೆಹಿಡಿದು ಕೆಳಕ್ಕೆ ಇಳಿಸಿದ್ದರು. ಮೂವತ್ತಾರು ವರುಷಗಳ ಬಳಿಕ ಎಪ್ಪತ್ತು ದಾಟಿದ ಮುದುಕನನ್ನು ಕೈಹಿಡಿದು ಮೇಲಕ್ಕೊಯ್ದು ಕುಳ್ಳಿರಿಸಿದರು.

ಯದುವಂಶದ ಅರಸನಿಗೆ ಮತ್ತೆ ರಾಜ್ಯಪ್ರಾಪ್ತಿಯಾಯಿತೆಂದು ಪ್ರಜೆಗಳು ಸಂತೋಷ ಪಟ್ಟರು.

"ಶ್ರೀಕೃಷ್ಣಭೂಪ–ಮನೆಗೆಲ್ಲ ದೀಪ" ಎಂದು ಕೊಂಡಾಡಿದರು.

ರಾಜನ ಪುನಃ ಪಟ್ಟಾಭಿಷೇಕ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ಎಲ್ಲೆಡೆಗಳಲ್ಲವೂ ಸಂತೋಷ ಸಂಭ್ರಮ.

ಆ ನಿಮಿತ್ತ, ಬೆಟ್ಟದ ಮೇಲೆ ಚಾಮುಂಡೇಶ್ವರಿಗೂ ಶ್ರೀರಂಗಪಟ್ಟಣದಲ್ಲಿ ರಂಗನಾಥ ನಿಗೂ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೂ ವಿಶೇಷ ಪೂಜೆಗಳಾದುವು.

ಆ ಸಂದರ್ಭದಲ್ಲಿ ರಾಜ್ಯದ ವಿವಿಧ ಸೆರೆಮನೆಗಳಿಂದ, ಅಪಾಯಕಾರಿಗಳಲ್ಲವೆಂದು ಆಂಗ್ಲ ಅಧಿಕಾರಿಗಳು ಪರಿಗಣಿಸಿದ ಅನೇಕ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ಶ್ರೀರಂಗಪಟ್ಟಣದ ಸೆರೆಮನೆಯಿಂದ ಹೊರಬಂದವರಲ್ಲಿ, ನಡುಬಾಗಿದ ಮೂಳೆಯ ಹಂದರವೊ೦ದಿತ್ತು.

ಆ ಮನುಷ್ಯ ಕಾವಲುಗಾರರನ್ನು ಕೇಳಿದ:

"ಇದೇನು ಜಾತ್ರೆ ? ಯಾಕೆ ಬಿಟ್ಟಿರಿ ನಮ್ಮನ್ನು? ಒಳಗೇ ಹಾಯಾಗಿತ್ತಲ್ಲ!"

"ಹೊರಟ್ಹೋಗು, ಮಹಾರಾಜರಿಗೆ ಇವತ್ತು ಪಟಾಭಿಷೇಕ." ಆತ ಪ್ರಶ್ನಿಸಿದ:

"ಯಾವ ಮಹಾರಾಜರಿಗಪ್ಪ?"

"ಕೃಷ್ಣರಾಜ ಒಡೆಯರಿಗೆ! ಅರಸನ ಹೆಸರೂ ತಿಳೀದಾ ನಿಂಗೆ?"

ಆ ವ್ಯಕ್ತಿಯ ಹುಬ್ಬುಗಳು ಮೇಲೇರಿದುವು. ಗಂಟು ಕಟ್ಟಲೆತ್ನಿಸಿ ಮತ್ತೆ ಸಡಿಲ ಗೊ೦ಡುವು.

ಆತ ನಿಧಾನವಾಗಿ ಅ೦ದ :