ಈ ಪುಟವನ್ನು ಪರಿಶೀಲಿಸಲಾಗಿದೆ

ಸಾಮಿ ಅಪರಂಪಾರ ೨೦೩

"ಒಬ್ಬ ರಾಜನಿಗಾದರೂ ಪಟ್ಟ ಸಿಗ್ತಲ್ಲ! ಮೈಸೂರು ರಾಜ್ಯವಾದರೂ ಸ್ವತಂತ್ರ ವಾಯ್ತಲ್ಲ ! ಸಂತೋಷವಪ್ಪ !"

ಪ್ರಯಾಸಪಡುತ್ತ ಆತ ಮುಂದೆ ನಡೆದ.

'ನಂಜರಾಜಪಟ್ಟಣಕ್ಕೆ ಹೋಗಬೇಕು. ಯಾವುದು ದಾರಿ?ಸ್ವಾಮಿಗಳು ಹೇಗಿದಾರೋ! ಯಾರನ್ನು ಕೇಳಿದರೆ ತಿಳಿದಾತು?'

–ಎಂದು ತನ್ನಷ್ಟಕ್ಕೇ ಅವನು ಗೊಣಗಿದ.

ಮುಂದೆ ಐದು ದಿನ ಕಾವೇರಿ ದಂಡೆಯಲ್ಲಿ ಜನ ಅವನನ್ನು ಕಂಡರು.

ಪ್ರಯಾಣಕ್ಕೆಂದು ಆತ ಒಂದು ಊರುಗೋಲನ್ನೂ ದೊರಕಿಸಿಕೊಂಡಿದ್ದ. ಆದರೆ, ದಿನದಿಂದ ದಿನಕ್ಕೆ ಅವನು ಶಕ್ತಿಗುಂದುತ್ತಲಿದ್ದುದು ಸ್ಪಷ್ಟವಾಗಿತು.

ಆರನೆಯ ದಿನ, ಊರುಗೋಲು ಮಾತ್ರ ದಂಡೆಯ ಮೇಲಿತು, ವ್ಯಕ್ತಿ ಇರಲಿಲ್ಲ.

                       ೭೨

ಕೆಲ ತಿಂಗಳ ಅನಂತರದ ಮಾತು.

ಒಂದು ರಾತ್ರೆ ಅಪರಂಪಾರ ನಿದ್ದೆಯಲ್ಲಿ ಚಿಟ್ಟನೆ ಚೀರಿಕೊಂಡ. ಎಚ್ಚರವಾಯಿತು; ಗಡಬಡಿಸಿ ಎದ್ದು ಕುಳಿತ.

ಕೆಟ್ಟ ಕನಸು.

[ಕೆಟ್ಟದೆ ? ಕೆಟ್ಟದೆ?]

ಕನಸಿನಲ್ಲಿ ಅತಿ ವಿಸ್ತಾರದ ಎರಡು ಅಂಗೈಗಳು ಒಂದಕ್ಕೊಂದು ಜೋಡಿಯಾಗಿ ಅವನ ಮುಂದೆ ಕಾಣಿಸಿಕೊಂಡಿದ್ದುವು. ಕೋಮಲ ಸುಸ್ಪಷ್ಟವಾದ ರೇಖೆಗಳು. ಅಂಗೈಗಳ ಹೊರತು ಬೇರೆ ಅವಯವಗಳಿರಲಿಲ್ಲ. ಆದರೆ ಹೆಣ್ಣು ಧ್ವನಿಯೊಂದು ಗಹಗಹಿಸಿ ನಗುತ್ತಿತು. ಅಂಗೈಗಳು ಕ್ರಮೇಣ ಹಿಂದಕ್ಕೆ ಸರಿಯತೊಡಗಿ, ಕಿರಿದಾಗಿ-ಕಿರಿದಾಗಿ, ಚುಕ್ಕೆಯಾಗಿ ಶೂನ್ಯದಲ್ಲಿ ಲೀನವಾಗಿಬಿಟ್ಟವು.

ಕಣ್ಣಿಲ್ಲದವನು ತಾನು. ಅಂಗೈಗಳನ್ನು ಕಾಣುವುದೆಂದರೇನು ? ಹೇಗೆ ಕಂಡೆ ? ಕನಸು, ನಿಜ. ಆದರೆ ಅದರ ಅರ್ಥ ? ಅಥವಾ ಜಾಗೃತಾವಸ್ಥೆಯಲ್ಲೇ ಕಂಡೆನೊ ? ಅಂಗೈಗಳು ತನ್ನ ಮುಂದೆಯೇ ಇವೆಯೊ ಏನೊ ? ಆ ನಗೆ? ಎದುರಲ್ಲಿ ಯಾರೂ ಇಲ್ಲವಷ್ಟೆ ? ತನ್ನನ್ನು ಅಣಕಿಸುತ್ತಿಲ್ಲವಷ್ಟೆ? ಇರಲಾರದು. ನೆನಪಾಗುತ್ತಿದೆ. ಆ ಅಂಗೈಗಳನ್ನು ತಾನು ಹಿಂದೆ ಕಂಡಿದ್ದೆ-ಕಂಡಿದ್ದೆ. ಆದರೆ, ಕನಸಿನಲ್ಲಿ ಯಾಕೀಗ? ಯಾಕೆ?

...ಉತ್ತರವಿರಲಿಲ್ಲ. ಅಪರಂಪಾರ ಗೋಡೆಗೊರಗಿ ಕುಳಿತು 'ಶಿವ ಶಿವ ಶಿವ' ಎನ್ನುತ್ತ ಮನಸಿಗೆ ನೆಮ್ಮದಿ ತಂದುಕೊಳ್ಳಲು, ಇರುಳನ್ನು ಕಳೆಯಲು, ಯತ್ನಿಸಿದ.

                             *  *  *

ಅಪರಂಪಾರ ಕನಸು ಕಂಡ ಘಳಿಗೆಯಲ್ಲಿ, ದೂರದ ಅಪ್ಪಂಗಳದಲ್ಲಿ, ರಾಜಮ್ಮಾಜಿಗೆ ಪ್ರಾಣೋತ್ಕ್ರಮಣವಾಗಿತ್ತು.