ಈ ಪುಟವನ್ನು ಪ್ರಕಟಿಸಲಾಗಿದೆ

viii

ಈ ಗ್ರಂಥದ ಭಾಷೆಯ ರೀತಿಯೂ ಗಮನಕ್ಕೆ ಅರ್ಹವಾದದ್ದು. ವಿಷಯದ ಸೊಗಸಿನಂತೆ ಈ ಭಾಷೆಯ ಸೊಗಸೂ ಜನಜೀವನದ ಸಾಮೀಪ್ಯದಿಂದ ಬಂದಿದೆ. ಈ ಗ್ರಂಥದಲ್ಲಿ ಜನರಾಡುವ ಮಾತೇ ಸಾಹಿತ್ಯವೂ ಆಗಿದೆ. ನಿಜವೂ ಇಷ್ಟೇ. ಸಾಹಿತ್ಯದ ಭಾಷೆಯೆಂದರೆ ಬೇರೆ ಯಾವುದೋ ಒಂದು ಭಾಷೆಯೆಂದು ನಮ್ಮಲ್ಲಿ ಅಲ್ಲಲ್ಲಿ ವಾಡಿಕೆಯಾಗಿರುವ ಭಾವನೆ ಅಷ್ಟೇನೂ ಸರಿಯಾದುದಲ್ಲ. ಗ್ರಂಥವೆನ್ನುವುದು ಬಹುಮಟ್ಟಿಗೆ ಬರಹದ ಮೂಲಕ ಮಾಡುವ ಸಂಭಾಷಣೆ. ಸಂಭಾಷಣೆಯ ವಿಷಯ ಬೇರೆ ಬೇರೆಯಾದಾಗ ಅದಕ್ಕೆ ಅನುಗುಣವಾಗಿ ಭಾಷೆಯ ರೀತಿಯು ಸ್ವಲ್ಪವೋ ಹೆಚ್ಚಾಗಿಯೋ ಮಾರ್ಪಡಬಹುದೇ ಹೊರತು ಸಂಭಾಷಣೆಯೇ ಅಲ್ಲದ ಬರಹ ಬಹಳವಿರಲಾರದು. ಜನರ ದಿನ ದಿನದ ಜೀವನವನ್ನು ವರ್ಣಿಸುವುದಕ್ಕೆ ಅವರ ದಿನ ದಿನದ ಭಾಷೆಯೇ ತಕ್ಕದ್ದು. ಇದನ್ನು ಉಪಯೋಗಿಸಿರುವುದರಿಂದ ಈ ಗ್ರಂಥದಲ್ಲಿ ಆ ಜನದ ಬಾಳಿನ ಸರಳತೆ, ಸ್ವಚ್ಛತೆ, ನೋವು, ನಗೆ ಎಲ್ಲವೂ ಸುಲಭವಾಗಿ ವ್ಯಕ್ತವಾಗಿವೆ. ಇಲ್ಲಿ ಬರುವ ಜನರೂ ಅವರ ನಡೆಯ ನುಡಿಯ ನಿಜವೆಂದು ನಮ್ಮ ಆಂತರ್‍ಯವು ಒಪ್ಪುತ್ತದೆ. ನಿಜವಲ್ಲ ಎಂದು ಎಲ್ಲಿಯಾದರೂ ಕಾಣುವುದಾದರೆ ಈ ಸೂತ್ರವನ್ನು ಬಿಟ್ಟ ಕಡೆಯಲ್ಲಿಯೇ ಉತ್ತಮ ರೀತಿಯ ವಸ್ತು, ಪ್ರಾಜ್ಞತೆಗೆ ಈ ಬಗೆಯ ಕೌಶಲವೂ ಸೇರಿ ಈ ಗ್ರಂಥದ ಚಿತ್ರಗಳೆಲ್ಲ ಜನರ ಜೀವನದಿಂದ ಎತ್ತಿಟ್ಟವುಗಳಂತೆ ಕಾಣುತ್ತಿವೆ.

ಗ್ರಂಥಕರ್ತರಿಗೆ ನಮ್ಮ ನಾಡಮೇಲೆ ನಮ್ಮ ಜನರ ಮೇಲೆ ಬಹಳ ಪ್ರೇಮವಿದೆ. ಜಾತಿ ಮತ ಭೇದಗಳಿಲ್ಲದೆ ಇವರು ಎಲ್ಲವನ್ನೂ ಸಮವಾದ ದೃಷ್ಟಿಯಿಂದ ಏಕರೀತಿಯ ವಿಶ್ವಾಸದಿಂದ ನೋಡಬಲ್ಲರು. ಪ್ರೇಮಪೂರಿತವಾದ ಇವರ ಕಣ್ಣು ಈ ನಾಡಿನಲ್ಲಿ ಈ ಜನದಲ್ಲಿ ಇರುವ ಒಳ್ಳೆಯ ಗುಣಗಳನ್ನು ನೋಡಿ ನೋಡಿ ಆನಂದಗೊಂಡಿದೆ. ತಪ್ಪು ಕಂಡಲ್ಲಿ ಇಂಥ ಕಣ್ಣು ಕೋಪದ ಕಿಡಿಯನ್ನು ಉಗುಳುವುದಿಲ್ಲ; ದೊಡ್ಡ ತಪ್ಪಾದರೆ ಎರಡು ತೊಟ್ಟು ಕಣ್ಣೀರನ್ನು ಹಾಕುತ್ತದೆ; ಸಣ್ಣ ತಪ್ಪಾದರೆ ನಗೆಯನ್ನು ಸೂಸುತ್ತದೆ. ಈ ಗ್ರಂಥದಲ್ಲಿ ಗ್ರಂಥಕರ್ತರು ಜನರ ದೊಡ್ಡ ತಪ್ಪುಗಳನ್ನು ತೋರಿಸಲು ಯತ್ನಿಸಿಲ್ಲ. ಅದನ್ನು ಇತರರು ಮಾಡಬಹುದು; ಇವರೇ