ಈ ಪುಟವನ್ನು ಪ್ರಕಟಿಸಲಾಗಿದೆ

ix

ಇನ್ನೊಂದು ಸಂದರ್ಭದಲ್ಲಿ ಮಾಡಬಹುದು. ಈ ಗ್ರಂಥದಲ್ಲಿ ಪ್ರೇಮದಿಂದ ಕಂಡ ಕೆಲವು ಒಳ್ಳೆಯ ಗುಣಗಳು, ಸಣ್ಣ ಪುಟ್ಟ ತಪ್ಪುಗಳು ಇಷ್ಟನ್ನು ಮಾತ್ರ ಇವರು ಸೂಚಿಸಿದ್ದಾರೆ. ಗುಣಗಳ ಚಿತ್ರದಿಂದ ನಮಗೆ ನಮ್ಮ ಜೀವನದ ವಿಷಯದಲ್ಲಿ, ನಮ್ಮ ಗ್ರಾಮಗಳ ಜೀವನದ ವಿಷಯದಲ್ಲಿ ಪ್ರೀತಿಯುಂಟಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳ ನೋಟದಿಂದ ನಾವು ಗ್ರಂಥಕರ್ತರೊಂದಿಗೆ ನಗುತ್ತೇವೆ. ಭಾವನೆಯ ಉನ್ನತ ಸ್ಥಾನಗಳಲ್ಲಿ ಕುಳಿತು ಓದುವವರನ್ನು ಜೊತೆಯಲ್ಲಿ ಕರೆದುಕೊಂಡು ಅವರಿಗೆ ಶೀಲದ ಸೌಂದರ್್ಯವನ್ನು ತೋರಿಸುವ ಶಕ್ತಿ ಅಪೂರ್ವವಾದದ್ದು. ಈ ಗ್ರಂಥಕರ್ತರಲ್ಲಿ ಈ ಶಕ್ತಿ ಚೆನ್ನಾಗಿದೆ.

ಜನರ ವಿಷಯದಲ್ಲಿ, ನಾಡ ವಿಷಯದಲ್ಲಿ ತಮಗಿರುವ ಪ್ರೇಮವನ್ನು ಸೂಚಿಸಿ ಅದೇ ಪ್ರೇಮವನ್ನು ಓದುವವರಲ್ಲಿ ಉಂಟುಮಾಡಲು ಇವರು ಉಪಯೋಗಿಸಿರುವ ಮುಖ್ಯ ಸಾಧನ ಹಾಸ್ಯ. ಈ ಗ್ರಂಥವನ್ನು ಓದುತ್ತಾ ನನಗೆ ಹತ್ತಾರು ಸಲ ಮಿತವಾಗಿಯೋ ಅತಿಯಾಗಿಯೋ ನಗೆ ಬಂದಿದೆ. ಕಾವೇರಿಯ ಪ್ರವಾಹ ಎಷ್ಟು ಎತ್ತರ ಬಂದಿತ್ತು ಎನ್ನುವುದನ್ನು ಆಯಾ ವರ್ಷ ಯಾರ ಮನೆಯ ಬಾಗಿಲಲ್ಲಿ ಸೀರೆ ಒಗೆದರು ಎನ್ನುವುದರಿಂದ ವರ್ಣಿಸುವ ಇವರ ಜನರನ್ನೂ, ಇವರ ಬಸ್ ಪ್ರಯಾಣದ ವರ್ಣನೆಯನ್ನೂ, ಇವರಿಗೆ ದಾರಿಯಲ್ಲಿ ಒಂದೊಂದಾಗಿ ಆದ ತೊಂದರೆಗಳ ಕತೆಯನ್ನೂ, ಕಾವೇರಿಯ ಪ್ರವಾಹಕ್ಕೆ ಹೆದರಿ ಮದುವೆಗಾಗಿ ಆಚೆಯ ತಡಿಗೆ ಹೋಗಲಾರದೆ ಈ ತಡಿಯಿಂದಲೇ ವಧೂವರರಿಗೆ ಆಶೀರ್ವಾದಮಾಡುತ್ತೇನೆಂದ ಇವರ ಜತೆಯ ಮುದುಕರ ವಿಷಯವನ್ನೂ, ಐಯಂಗಾರಿಗಳ ಮೊಹರಮಿನ ವರ್ಣನೆಯನ್ನೂ, ಬಾಲ ವಸ್ತ್ರಾಪಹರಣದ ಕತೆಯನ್ನೂ, ಜೋಡಿದಾರರ ಬಾಲ್ಯದ ಕಲ್ಕ್ಯವತಾರದ ವೈಭವವನ್ನೂ, ಆಮೇಲೆ ಅವರು ರೋಣಗಲ್ಲಿನಂತೆ ಕುದುರೆಯ ವೇಗವನ್ನು ತಡೆದುದೇ ಮೊದಲಾದ ವಿಷಯವನ್ನೂ, ಹನುಮನು ಹೆಂಡದಿಂದ ಉದ್ಧತನಾದ ಚರಿತ್ರೆಯನ್ನೂ, ಕಿಟ್ಟು ನರಹರಿಯ ತಿಂಡಿಯ ಹೂಜಿಯ ಕತೆಯನ್ನೂ ನೋಡಿ ಓದಿ ಕೇಳಿ ಯಾರಾದರೂ ನಗುವರು. ಗ್ರಂಥಕರ್ತರು ಇಲ್ಲಿ ಚಿತ್ರಿಸಿರುವ ರೀತಿಯಿಂದ ಇವರ ಪಾತ್ರಗಳು ಇನ್ನು ಮೇಲೆ ಸಾಹಿತ್ಯ ಪ್ರೇಮಿಗಳಿಗೆ ಬಹಳ ಪ್ರಿಯರಾಗುತ್ತಾರೆ.