ಈ ಪುಟವನ್ನು ಪ್ರಕಟಿಸಲಾಗಿದೆ
೩೪
ಹಳ್ಳಿಯ ಚಿತ್ರಗಳು

"ಜಕಣಾಚಾರಿ, ಇದು ನೀರವವಾದ ಧ್ವನಿಯಿಂದ ನಿನ್ನ ಮಹಿಮೆಯನ್ನು ಹೊಗಳುತ್ತಿದೆ" ಎಂದು ಪ್ರಾರಂಭಿಸಿದೆ.

ಗುಂಡನು “ನಿನ್ನ ವಾಚಾಳತನವನ್ನು ಇಲ್ಲಿ ಬಿಚ್ಚಬೇಡ" ಎಂದು ಗದರಿಸಿದ. ನಾನು ಮಾತನಾಡದೆ ಸುಮ್ಮನಾದೆ.

ದೇವಾಲಯದ ಒಳಗಿನ ಕಂಬದಲ್ಲಿ ಒಂದು ಸ್ತ್ರೀ ವಿಗ್ರಹವಿದೆ. ಅದರ ಮುಖವಂತೂ ಲಾವಣ್ಯದಿಂದ ಉಕ್ಕುತ್ತಿದೆ. ಇದಕ್ಕೂ ಜೀವವಿದೆಯೋ ಎಂದು ನಮಗೆ ಭ್ರಾಂತಿ ಬಂದಿತು. ವಿಗ್ರಹವಂತೂ ಲಜ್ಜೆಯೇ ಮೂರ್ತಿಮತ್ತಾಗಿ ನಿಂತಿದೆ. ಯಾರು ಏನು ತಿಳಿದುಕೊಳ್ಳುತ್ತಾರೆಯೋ ಎಂಬುದಾಗಿ ನಾವು ಸುತ್ತಲೂ ೨-೩ ಸಲ ನೋಡಿ ಅದರ ಕೆನ್ನೆಗಳನ್ನು ಒಂದು ಸಲ ಮುಟ್ಟಿದೆವು. ನಮ್ಮ ಸ್ಪರ್ಶದಿಂದ ಅದು ನಾಚಿಕೆಗೊಂಡಂತೆ ತೋರಿತು. ಗುಂಡನು "ಎಲ್ಲರೂ ಹೀಗೆಯೇ ಮುಟ್ಟುತ್ತಿದ್ದರೆ ಈ ವಿಗ್ರಹದ ಕೆನ್ನೆಯು ಬೇಗ ಗುಂಡಿಬಿದ್ದು ಹೋಗುತ್ತದೆ" ಎಂದ.

ಅನಂತರ ಮಂಗಳಾರತಿ ಆಯಿತು. ಗುಂಡನು "ಮೂಲದೇವರು ದೊಡ್ಡದಾಗಿ ಗಂಭೀರವಾಗಿದೆ. ಪರವಾಯಿಲ್ಲ. ಮುಖದಲ್ಲಿ ಒಂದು ವಿಧವಾದ ಗತ್ತು ಇದೆ. ಈ ವೈಭವ, ಈ ದೇವಸ್ಥಾನ, ಈ ಕಲೆ ಇವೆಲ್ಲವೂ ನನ್ನ ಹಕ್ಕು ಎಂದು ಅದು ಹೇಳುತ್ತಿರುವಂತೆ ತೋರುತ್ತದೆ" ಎಂದ. ಮಂಗಳಾರತಿಯಾಗಿ ನಾವು ದೇವಾಲಯದಿಂದ ಹೊರಕ್ಕೆ ಬರುವ ವೇಳೆಗೆ ೭-೩೦ ಗಂಟೆ ಆಗಿದ್ದಿತು. ಆಗತಾನೆ ಚಂದ್ರನು ಹೊರಕ್ಕೆ ಬರುತ್ತಿದ್ದನು. ಬೆಳದಿಂಗಳಲ್ಲಿ ಆ ದೇವಾಲಯದ ಒಂದು ನೋಟವನ್ನು ಅನುಭವಿಸಬೇಕೆಂದು ನಾವು ಚೆನ್ನಿಗರಾಯನ ದೇವಾಲಯದ ಎದುರಿಗೆ ಕುಳಿತುಕೊಂಡೆವು. ಹಿಂದಲ ವೈಭವ, ಅಂದಿನ ರಾಜರು, ಆಗಿನ ಕಲೆಯ ಪರಾಕಾಷ್ಠೆ, ಇಂದಿನ ಕಲಾರಹಿತ ಜೀವನದ ನಿಸ್ಸಾರತೆ- ಇವುಗಳ ಹಗಲು ಕನಸುಗಳನ್ನು ಒಂದೊಂದಾಗಿ ಕಂಡೆವು. ಗತವೈಭವವನ್ನು ನೆನೆದು ನಿಟ್ಟುಸಿರುಬಿಟ್ಟೆವು.

ರಾತ್ರಿ ಹತ್ತೂವರೆ ಗಂಟೆಯಾಯಿತು. ನಮ್ಮ ಗಂಟಿನಲ್ಲಿದ್ದ ಹುಳಿಯನ್ನವನ್ನೂ ತಿಂಡಿಯನ್ನೂ ಬಲಿಹಾಕಿಬಿಟ್ಟೆವು. ಅನಂತರ ಮಲಗಿಕೊಳ್ಳುವುದೆಲ್ಲಿ? ಎಂಬ ಯೋಚನೆಗೆ ಪ್ರಾರಂಭವಾಯಿತು. ನಮಗೆ ಯಾರೋ