ಗುರುತಿನವರೊಬ್ಬರು ಅಲ್ಲಿ ಶಾಲೆಯ ಉಪಾಧ್ಯಾಯರಾಗಿದ್ದರು. ಅವರ ಮನೆಯನ್ನು ಬಹಳ ಶ್ರಮಪಟ್ಟು ಕಂಡುಹಿಡಿದೆವು. ಗುಂಡನು "ಈ ಅವೇಳೆಯಲ್ಲಿ ಪಾಪ ಮಲಗಿರುವವರನ್ನು ಯಾಕೆ ಎಬ್ಬಿಸಬೇಕು. ಹೇಗೂ ರೊಮಾಂಟಿಕ್ ಕಂಬಳಿ ಇದೆಯಲ್ಲ. ಛತ್ರದಲ್ಲಿ ಹೋಗಿ ಮಲಗಿರೋಣ ಬಾ” ಎಂದನು. ಛತ್ರದಲ್ಲಿ ಚಳಿಯಲ್ಲಿ ನಡುಗುವುದು ನನಗೆ ಇಷ್ಟವಿರಲಿಲ್ಲ. ನಾನು "ಉಪಾಧ್ಯಾಯ ಇನ್ನೂ ಹುಡುಗ. ಇಷ್ಟು ಬೇಗ ಮಲಗಿರೋದಿಲ್ಲ. ಮಲಗಿದ್ದರೆ ಎಬ್ಬಿಸೋಣ. ನಾವೇನು ನಿತ್ಯ ಬರುತ್ತೇವೆಯೆ ಬಾ?” ಎಂದೆ.
"ನಿತ್ಯ ಬರದ ಮಾತ್ರಕ್ಕೆ ಮಲಗಿರುವವರನ್ನು ಅವೇಳೆಯಲ್ಲಿ ಎಬ್ಬಿಸಲು ನಿನಗೆ ಯಾರು ಅಧಿಕಾರವನ್ನು ಕೊಟ್ಟಿದ್ದಾರೆ" ಎಂದ ಗುಂಡ. ನಾನು ಅವನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಗುಂಡನು "ನೀನು ಮಹಾ ವರಟ" ಎಂದ. ಅದಕ್ಕೂ ಸುಮ್ಮನಿದ್ದುಬಿಟ್ಟೆ,
ಉಪಾಧ್ಯಾಯನ ಮನೆ ಬಾಗಲಿಗೆ ಒಳಗಿನಿಂದ ಅಗಣಿ ಹಾಕಿತ್ತು. ಕೂಗಿ ಕೂಗಿ ನಮಗೆ ಗಂಟಲು ಸೋತುಹೋಯಿತು. ನೆರೆಹೊರೆಯ ಮನೆಯವರಿಗೆಲ್ಲಾ ಎಚ್ಚರವಾಗಿಬಿಟ್ಟಿತು. ಆದರೆ ಪುಣ್ಯಾತ್ಮ ನಮ್ಮ ಮೇಷ್ಟು ಮಾತ್ರ ಹೊರಕ್ಕೆ ತಲೆಹಾಕಲಿಲ್ಲ. ನಮಗೂ ಬೇಜಾರಾಗಿ ಯಾವುದಾದರೂ ಒಂದು ಛತ್ರಕ್ಕೆ ಹೋಗೋಣವೆಂದು ಯೋಚಿಸುತ್ತಿರುವಷ್ಟರಲ್ಲಿ, ಒಳಗಡೆ ಹೆಜ್ಜೆಯ ಸದ್ದಾಯಿತು. ಮೇಷ್ಟು ಕಣ್ಣು ತಿಕ್ಕುತ್ತಾ ಬಾಗಲು ತೆರೆದ. ಒಳಗೆ ಹೋಗಿ ಮಲಗಿಕೊಂಡೆವು.
ಬೆಳಿಗ್ಗೆ ಆರೂವರೆ ಗಂಟೆಗೆ ಬಸ್ಸು ಹಳೇಬೀಡಿಗೆ ಹೊರಡುವುದರಲ್ಲಿದ್ದಿತು. ಆ ಮಹಾರಾಯ್ತಿ ಮೇಷ್ಟ್ರು ಹೆಂಡತಿ ಅಷ್ಟು ಹೊತ್ತಿಗೇ ನಮಗೆ ಕಾಫಿ ಉಪ್ಪಿಟ್ಟು ಮಾಡಿಕೊಟ್ಟರು. ಮೇಷ್ಟು, ಇನ್ನೂ ಮಲಗಿಯೇ ಇದ್ದ. ನಾವು ಬಸ್ಸಿನಲ್ಲಿ ೭ ಗಂಟೆಗೆ ಹಳೇಬೀಡನ್ನು ಮುಟ್ಟಿದೆವು.
ಹಳೇಬೀಡಿಗೆ ಹೋದೊಡನೆಯೇ ನನಗೆ ಹಿಂದೆ ನಡೆದುದೆಲ್ಲಾ ಜ್ಞಾಪಕಬಂದಿತು. ಗುಂಡನು