ಆದರೆ ಆಗಲೂ ಅರೋಗ ದೃಢಕಾಯಳಾಗಿದ್ದಳು. ಪ್ರತಿದಿನವೂ ನದಿಗೆ ಹೋಗಿ ಸ್ನಾನಮಾಡಿಕೊಂಡು ಬರುತ್ತಿದ್ದಳು. ಅವಳನ್ನು ಕಂಡರೆ ಜೋಡಿದಾರನಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಇವನು ನದಿಗೆ ಹೋದ ದಿವಸಗಳಲ್ಲೆಲ್ಲಾ, ಅವಳ ಕಣ್ಣಿಗೆ ಇವನು ಬೀಳುತ್ತಲೇ ಇದ್ದನು. ಇವನನ್ನು ಕಂಡಕೂಡಲೆ ಅವಳು ಮನೆಗೆ ಬಂದು "ನಿಮ್ಮ ಹುಡುಗ ಹೊಳೆಗೆ ಹೋಗಿದ್ದಾನೆ. ಇನ್ನು ಮಧ್ಯಾಹ್ನದವರೆಗೆ ಈಜುತ್ತಾನೆ. ಅದಕ್ಕೆ ಅಷ್ಟು ಚಳಿ” ಎಂದುಬಿಡುತ್ತಿದ್ದಳು. ಸರಿ ದೊಡ್ಡ ಜೋಡಿದಾರರು ಬೆತ್ತವನ್ನು ಸಿದ್ಧಮಾಡಿಕೊಂಡು ಇವನು ಬರುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದರು. ಅಪರಾಧಿಯಾದ ಹುಡುಗನಿಗೆ ಅವರು ಬಾಗಲಿನಲ್ಲಿ ಕುಳಿತಿದ್ದರೆ ಒಳಕ್ಕೆ ಬರಲು ಧೈರ್‍ಯವುಂಟಾಗುತ್ತಿರಲಿಲ್ಲ. ಹಿತ್ತಲಿನ ಕಡೆ ಒಂದು ಬಾಗಲಿದೆ. ಆ ಬಾಗಲಿಗೆ ಬರಬೇಕಾದರೆ ಊರ ಸುತ್ತ ಮತ್ತೆ ಸುತ್ತಿಕೊಂಡು ಬರಬೇಕು. ಆದರೂ ನಮ್ಮ ಹುಡುಗ ಊರು ಸುತ್ತಿಕೊಂಡೇ ಹಿತ್ತಲಿನ ಬಾಗಲಿಗೆ ಬರುತ್ತಲಿದ್ದ. ಬಾಗಿಲು ಹಾಳಾದ್ದು ಎಷ್ಟು ಮೆಲ್ಲಗೆ ತೆರೆದರೂ ಗೊರ್ ಅಂತ ಶಬ್ದಮಾಡಿಯೇ ಬಿಡುತ್ತಿದ್ದಿತು. ಸರಿ ಜೋಡಿದಾರರು ಒಳಕ್ಕೆ ಬರುತ್ತಿದ್ದರು. ಛಡಿ ಏಟು. ಮುದುಕಿಯ ಕಣ್ಣಿನಿಂದಲಂತೂ ಅವನಿಗೆ ತಪ್ಪಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅವಳು ಇವನ ಚಿತ್ರಗುಪ್ತನಾಗಿಬಿಟ್ಟಳು. ಅವಳಿಗೆ ಕಾಣದಂತೆ ಇವನು ಪೇಟೆಯಲ್ಲಿ ಹೋದರೆ, ಆ ದಿವಸ ಕೋಟೆಯಲ್ಲಿ ಆದಿಕರ್ನಾಟಕರ ಗಲಾಟೆಯೆಂದು ಅವಳೂ ಪೇಟೆಯಲ್ಲಿಯೇ ಬಂದುಬಿಡುತ್ತಿದ್ದಳು. ನದಿಯ ತೀರದಲ್ಲಿ ಒಂದು ದೇವಾಲಯವಿದೆ. ಆ ದೇವಾಲಯದಲ್ಲಿ ಅಡಗಿಕೊಂಡಿದ್ದು, ಮುದುಕಿಯು ಮನೆಗೆ ಹೊರಟು ಹೋದ ಮೇಲೆ ತಾನು ನದಿಗೆ ಹೋಗೋಣ, ಇವಳ ಕಾಟ ತಪ್ಪುತ್ತೆ ಎಂದು ದೇವಾಲಯಕ್ಕೆ ಹೋದರೆ ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲವೆಂಬಂತೆ ದೇವಸ್ಥಾನದ ಬಾಗಲಿನಲ್ಲಿ ಅವಳೂ ಕಂಡುಬಿಡುತಿದ್ದಳು. ಈ ಮುದಿಗೂಬೆಯು ನನಗೆ ಗುಪ್ತ ಪೋಲಿಸ್ ಆಗಿಬಿಟ್ಟಳಲ್ಲಾ, ಎಂದು ಇವನಿಗೆ ಕೋಪ. ಆದರೆ ವಿಧಿಯಿಲ್ಲ. ಏಟು ತಿಂದು ಮೈ ಜಡ್ಡುಗಟ್ಟಿಹೋಯಿತು.
ಪುಟ:ಹಳ್ಳಿಯ ಚಿತ್ರಗಳು.djvu/೫೬
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಹಳ್ಳಿಯ ಚಿತ್ರಗಳು