ಹಳ್ಳಿಗೆ ಹೋಗಿಬಿಡುತ್ತೇನೆ. ಅವರೂ ಇವರಂತೆ ರಾಕ್ಷಸರಾಗಿರಲಾರರು" ಎಂದುಕೊಂಡು ಆ ಹಳ್ಳಿಯವರೆಗೆ ಓಡಿದರು.
ಆ ಹಳ್ಳಿಯ ಊರುಬಾಗಲಿನ ಅರಳೀಕಟ್ಟೆಯ ಮೇಲೆ, ಆ ಗ್ರಾಮದ ಪಟೇಲನು ಕುಳಿತಿದ್ದನು. ಬೆತ್ತಲೆ ಓಡಿಬಂದ ಈ ಬಡ ಬ್ರಾಹ್ಮಣನ ಅವಸ್ಥೆಯನ್ನು ಏನೆಂದು ವಿಚಾರಿಸಿದನು. ಜೋಡಿದಾರರಿಗೆ ಪಾಪ ಮಾತನಾಡು ವುದಕ್ಕೆ ಸಹ ಉಸಿರಿರಲಿಲ್ಲ. ಬಾಯೆಲ್ಲಾ ಒಣಗಿಹೋಗಿದ್ದಿತು. ಅವರು ತಮ್ಮ ಬೇಟೆಗಾರರ ಕಡೆಗೆ ಕೈ ತೋರಿಸಿ ನಡೆದ ವಿಷಯವನ್ನು ಎರಡು ಮಾತಿನಲ್ಲಿ ಹೇಳಿದರು. ಪಟೇಲನು 'ಸುದಾರಿಸಿಕೊಳ್ಳಿ, ನಿರಪರಾಧಿಗಳಿಗೆ ಭಯವಿಲ್ಲ' ಎಂದನು.
ವಿಚಾರಣೆಯಾಯಿತು. ಜೋಡಿದಾರರದು ತಪ್ಪಿಲ್ಲವೆಂದು ತೀರ್ಮಾನವಾಯಿತು. ಆದರೂ ಹಳ್ಳಿಯವರು ಇವರ ಕಡೆಗೆ ಕಣ್ಣನ್ನು ಕೆರಳಿಸಿ "ಲೋ ಹಾರುವಾ ಈವತ್ತು ತಪ್ಪಿಸಿಕೊಂಡೆ ಹೋಗು. ಇನ್ನೊಂದು ದಿವಸ ನಮಗೆ ಸಿಕ್ಕಿದರೆ ನಿನ್ನ ಚರ್ಮವನ್ನು ಸುಲಿದುಬಿಡುತ್ತೇವೆ" ಎಂದರು. ಜೋಡಿದಾರರು ಅಂದಿನಿಂದ ಈಚೆಗೆ ಆ ದಾರಿಯಲ್ಲಿ ನರಸೀಪುರಕ್ಕೆ ಹೋಗಲಿಲ್ಲ. ಈಗವರು ಹೋಗಬೇಕಾದರೂ ೪೦ ಮೈಲು ದೂರವಿರುವ ಮತ್ತೊಂದು ದಾರಿಯಲ್ಲಿ ಬಳಸಿಕೊಂಡು ಹೋಗುತ್ತಾರೆಯೇ ಹೊರತು, ೧೪ ಮೈಲು ಇರುವ ಈ ದಾರಿಯಲ್ಲಿ ಹೋಗುವುದಿಲ್ಲ.
೬. ಜೋಡಿದಾರರ ಬ್ರಹ್ಮಾಸ್ತ್ರ
ಈಗ ನಮ್ಮ ಜೋಡಿದಾರರಿಗೆ ವಯಸ್ಸು ೬೦ ಆಗಿಹೋಗಿದೆ. ಆದರೂ ದೃಢಕಾಯರಾಗಿದ್ದಾರೆ. ಹಿಂದೆ ಕಲಿತ ಇಂಗ್ಲಿಷೆಲ್ಲಾ ಮರೆತುಹೋಗಿದೆ. ೪-೬ ಸಂಸ್ಕೃತ ಶ್ಲೋಕಗಳನ್ನು ಉರುಹಾಕಿ ಅವಿದ್ಯಾವಂತರ ಎದುರಿನಲ್ಲಿ ತಾವೇ ಸಂಸ್ಕೃತ ವಿದ್ವಾಂಸರೆಂದು ನಟಿಸುತ್ತಾರೆ. ಎಲ್ಲೋ ಒಂದೊಂದು ಇಂಗ್ಲಿಷ್ ಪದವನ್ನು ಮಧ್ಯೆ ಮಧ್ಯೆ ಸೇರಿಸುತ್ತಾರೆ. ಹೊಟ್ಟೆ ಮಿತಿಮೀರಿ ಬೆಳೆದಿದೆ. ಸಿಟ್ಟೂ ಹೆಚ್ಚಾಗಿದೆ. ಆದರೆ ಆ ಸಿಟ್ಟಿನಿಂದ ಇತರರಿಗೆ