ಸಿಟ್ಬಂತು. ಕಳೆದುಹೋದದ್ದನ್ನ ಚಿಂತಿಸಿ ಫಲವಿಲ್ಲ. ಒಳಗಡೆ ಕೂತುಕೊ" ಎಂದರು. ಆದರೂ ಚೆನ್ನನಿಗೆ ನಂಬಿಕೆಯಾಗಲಿಲ್ಲ. ಆ ಬಾಯಿ ಬಡಕೊಂಡ ಜೋಡಿದಾರರೆಲ್ಲಿ? ತಂದೆಯಂತೆ ಪ್ರೇಮದಿಂದ ಮಾತನಾಡುವ ಇವರೆಲ್ಲಿ? ಇದೇನು ಈ ಒಗಟೆ, ಎಂದು ಅವನು ಭ್ರಾಂತನಂತೆ ಕಣ್ಣು ಮಿಟಕಿಸಿದನು. ಜೋಡಿದಾರರು ಚೆನ್ನನನ್ನು ಎಳೆದು ಒಳಕ್ಕೆ ಕೂರಿಸಿಕೊಂಡರು. ಚೆನ್ನನು ಹುಚ್ಚನಂತೆ ಸುಮ್ಮನೆ ಕುಳಿತುಬಿಟ್ಟನು. ಎತ್ತುಗಳು ನಿಧಾನವಾಗಿ ಗಾಡಿಯನ್ನು ಎಳೆದುಕೊಂಡು ಹೋಗುತ್ತಿದ್ದುವು. ಅಂತೂ ಹಾಸನಕ್ಕೆ ಸಕಾಲದಲ್ಲಿ ತಲಪಿ, ಜೋಡಿದಾರರು ತಮ್ಮ ಕೆಲಸಗಳನ್ನೆಲ್ಲಾ ಮಾಡಿಕೊಂಡರು.
ಒಂದು ಸಲ ಬೈಗಳವನ್ನು ತಿಂದುದರಿಂದಲೇ ಚೆನ್ನನು ಈಗ ಜೋಡಿದಾರರ ಪ್ರಿಯ ಶಿಷ್ಯನಾಗಿಬಿಟ್ಟಿದ್ದನು. ಅವರು ಅವನಿಗೆ ಹಾಸನದಲ್ಲಿ ಒಂದು ರೂಪಾಯಿಯನ್ನು ಕೊಟ್ಟು “ಹೋಗು, ಮಳೆಯಿಂದ ನೆನೆದು ನಿನ್ದೇಹವೆಲ್ಲಾ ಮಂಜಿನ ಗಡ್ಡೆಯಾಗಿದೆ. ಹೋಟ್ಲಿಗೆ ಹೋಗಿ ಚೆನ್ನಾಗಿ ಬಿಸಿನೀರಿನಲ್ಲಿ ಸ್ನಾನ ಮಾಡಿ ಬಿಸಿಬಿಸಿಯಾಗಿ ಒಳ್ಳೆ ಊಟವನ್ನು ಉಂಡು ಸ್ವಲ್ಪ ಕಾಫಿಯನ್ನೂ ಕುಡಿದು ಬಾ, ನಮ್ಮ ಕಾಫಿ; ನಿಮ್ಮ ಕಾಫಿಯಲ್ಲ" ಎಂದು ಹೇಳಿ ಕಳುಹಿಸಿದರು.
ಚೆನ್ನನು ಜೋಡಿದಾರರ ಮಾತನ್ನು ಮೀರಲಿಲ್ಲ. ಚೆನ್ನಾದ ಊಟವನ್ನೇ ಮಾಡಿದನು. ಆದರೆ ಕಾಫಿಯ ವಿಷಯದಲ್ಲಿ ಮಾತ್ರ ಅವರ ಮಾತನ್ನು ಮೀರಿದನು; ತನ್ನ ಕಾಫಿಯನ್ನೇ ಕುಡಿದನು. ೨-೩ ಸೇರು ಹೆಂಡವನ್ನು ಕುಡಿದು ಪ್ರಪಂಚವನ್ನೇ ಮರೆತು ಗಾಡಿಯ ಕೆಳಗೆ ಬಂದು ಮಲಗಿಬಿಟ್ಟನು. ಜೋಡಿದಾರರು ಕೆಲಸವನ್ನೆಲ್ಲಾ ಮುಗಿಸಿಕೊಂಡು ರಾತ್ರಿ ೮ ಗಂಟೆಯ ವೇಳೆಗೆ ಗಾಡಿಯ ಬಳಿಗೆ ಬಂದರು. ಚೆನ್ನನು ಹೆಂಡದ ಮತ್ತಿನಿಂದ ಗೊರಕೆ ಹೊಡೆಯುತ್ತಿದ್ದನು. ಜೋಡಿದಾರರು ಚೆನ್ನನನ್ನು ಬಲಾತ್ಕಾರವಾಗಿ ಎಬ್ಬಿಸಿದರು. ಅವನೂ ಹೇಗೋ ಗಾಡಿಯನ್ನು ಹೂಡಿದನು. ಎತ್ತು ನಿಧಾನವಾಗಿ ಹೊರಟಿತು. ಚೆನ್ನನಿಗೆ ಮತ್ತೆ ನಿದ್ರೆ ಬಂದುಬಿಟ್ಟಿತು. ಜೋಡಿದಾರರು “ಪಾಪ, ನೆನ್ನೆ ದಿವಸವೆಲ್ಲಾ