ಈ ಪುಟವನ್ನು ಪ್ರಕಟಿಸಲಾಗಿದೆ
ನಮ್ಮ ಜೋಡಿದಾರರ ಕೆಲವು ಚಿತ್ರಗಳು
೬೭

ನಿದ್ರೆಯಿಲ್ಲ. ಆದ್ದರಿಂದ ಗೊರಕೆ ಹೊಡೆಯುತ್ತಾನೆ" ಎಂದುಕೊಂಡರು. ಹೊರಟ ಸ್ವಲ್ಪ ಹೊತ್ತಿಗೆ ಅವರಿಗೂ ನಿದ್ರೆ ಬಂದುಬಿಟ್ಟಿತು.

ಅವರಿಗೆ ಎಷ್ಟು ಹೊತ್ತು ನಿದ್ರೆ ಬಂದಿತೋ ತಿಳಿಯದು. ಆದರೆ ಇದ್ದಕ್ಕಿದ್ದಂತೆ, ಒಮ್ಮಿಂದೊಮ್ಮೆ, ಗಾಡಿಯು ನಿಂತುಬಿಟ್ಟಿತು. ಅದು ನಿಂತ ಕೂಡಲೇ ಜೋಡಿದಾರರಿಗೆ ಎಚ್ಚರವಾಯಿತು. ೨-೩ ಸಲ ಚೆನ್ನನನ್ನು ಕೂಗಿದರು. ಚೆನ್ನನು ಮಾತನಾಡಲಿಲ್ಲ. ಜೋಡಿದಾರರ ಗ್ರಹಚಾರ. ಅವರು ಮಾಡಿದ್ದ ಸಹಾಯವು ಅವರ ಮೇಲೆಯೇ ತಿರುಗಿಕೊಂಡಿತು. ಜೋಡಿದಾರರು ಗಾಡಿಯಿಂದ ಕೆಳಕ್ಕೆ ಇಳಿದರು. ಆಕಾಶದಲ್ಲಿ ಚಂದ್ರನು ಕಾಣುತ್ತಿರಲಿಲ್ಲ. ಕೆಲವು ನಕ್ಷತ್ರಗಳು ಮಾತ್ರ ಥಳಥಳಿಸುತ್ತಿದ್ದುವು. ಗಾಳಿಯು ತಣ್ಣಗೆ ಬೀಸುತ್ತಿದ್ದಿತು. ಗಾಡಿಯ ಎದುರಿಗೆ ಆಳವಾದ ಒಂದು ಕಾಲುವೆ. ಅದರಲ್ಲಿ ನೀರಿರಲಿಲ್ಲ. ಎತ್ತುಗಳು ಇನ್ನು ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿದ್ದರೆ, ಅಥವ ಗಾಡಿಯ ಚಕ್ರವು ಇನ್ನು ಒಂದು ಉರುಳು ಮುಂದಕ್ಕೆ ನುಗ್ಗಿದ್ದರೆ, ದೇವರೇ ಗತಿ. ಜೋಡಿದಾರರು, ಎತ್ತು, ಗಾಡಿ, ಆಳು, ಎಲ್ಲಾ ೫೦-೬೦ ಅಡಿ ಆಳವಾದ ಹಳ್ಳದೊಳಗೆ ಬಿದ್ದುಹೋಗುತ್ತಿದ್ದರು. ರಸ್ತೆಯಲ್ಲಿ ಒಂದು ಕಾಲುದಾರಿಯು ಬಂದ ಕೂಡಲೇ ಎತ್ತುಗಳು ಆ ಕಡೆಗೆ ಹೊರಟುಬಿಟ್ಟಿದ್ದವು. ಆ ಕಾಲು ದಾರಿಯು ಎಲ್ಲಿಯವರಿಗೆ ಕಾಣುತ್ತಿದ್ದಿತೋ ಅಲ್ಲಿಯವರೆಗೆ ಎತ್ತುಗಳು ಬಂದು, ಕಾಲು ದಾರಿಯು ಅಳಿಸಿಹೋಗಿದ್ದ ಈ ಆಳವಾದ ಹಳ್ಳದ ಮುಂದೆ ನಿಂತುಬಿಟ್ಟಿದ್ದುವು. ಹಳ್ಳವನ್ನು ನೋಡಿ ಜೋಡಿದಾರರು ನಡುಗಿದರು. ಈ ದಿವಸ ತಾನು ಸಾಯದೆ ಉಳಿದದ್ದು ದೇವರ ಕೃಪೆ ಎಂದುಕೊಂಡರು. ತಮ್ಮ ಪ್ರಾಣವನ್ನುಳಿಸಿದ ಎತ್ತುಗಳನ್ನು ಬಹಳ ಶ್ಲಾಘಿಸಿದರು. ಅನಂತರ ಬಲಾತ್ಕಾರವಾಗಿ ಚೆನ್ನನನ್ನು ಎಬ್ಬಿಸಿದುದಾಯಿತು. ಆದರೆ ಆ ಕಾರಇರುಳಿನಲ್ಲಿ ಇವರಿಬ್ಬರಿಗೂ ದಾರಿಯು ತಿಳಿಯಲಿಲ್ಲ. ಆದುದರಿಂದ ಉಪಾಯ ಕಾಣದೆ, ಗಾಡಿಯನ್ನು ಮತ್ತೆ ಎತ್ತುಗಳು ಎಳೆದುಕೊಂಡು ಬಂದಿದ್ದ ಕಾಲು ದಾರಿಗೇ ತಿರುಗಿಸಿದರು. ಅಂತೂ ಇಂತೂ ರಸ್ತೆಗೆ ಬಂದುದಾಯಿತು. ಆದರೆ ರಸ್ತೆಯಲ್ಲಿಯೂ ಕೂಡ ನಮ್ಮ ಊರಿನ ಕಡೆಗೆ ಹೋಗುತ್ತಿದ್ದ ರಸ್ತೆ ಯಾವುದು ಎಂಬುದಾಗಿ ತಿಳಿಯದೆ, ಬಂದ ದಾರಿಯಲ್ಲಿ ಗಾಡಿಯನ್ನು ಹಿಂದಕ್ಕೆ ಹೊಡೆಸಿದರು.