ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

                                                             ೧೨೩
      "ದೇವೆಕಿ, ನೀನು ಬಾಗಿಲೆಳೆದುಕೊಂಡು ನಮ್ಮ ಗುಡಿಸಲಿಗೆ ಹೋಗ್ತೀಯಾ? 
   ಈಗ ಬರ್ತೇವೇಂತ ಅಮ್ಮನಿಗೆ ಹೇಳು."
      ಆಕೆ ಅನಿಶ್ಚಯತೆಯಿಂದ ತಡವರಿಸಿದಂತೆ ತೋರಿತು.
      "ಸುಮ್ನೆ ಯೋಚಿಸ್ಬೇಡ, ಈ ಲಫಂಗರ ಕಾಟ ಇದ್ದದ್ದೇ. ಮಗೂನ ಎತ್ತೊಂಡು 
   ಒಂಟಿಯಾಗಿ ಹೋಗೋದಕ್ಕೆ ಆಗ್ತದೇನು? ಅಥವಾ ನಾವು ಬರುವವರೆಗೂ 
   ಕಾದಿರ್ರ್ತಿಯೋ?"
       ಗುಡಿಸಲಿನೊಳಗೆ ತೂರಾಡುತ್ತಿದ್ದ ಸೀಮೆಎಣ್ಣೆಯ ದೀಪದ ಮಬ್ಬು ಬೆಳಕಿನಲ್ಲಿ 
   ಸಹನೆಯ ಸಂಕಟದ ಪ್ರತಿಮೂರ್ತಿಯಾಗಿ ಆಕೆ ಅಪ್ಪುವಿಗೆ ತೋರಿದಳು. ಆತನ 
   ಗಂಟಲಿನಿಂದಲೂ ಸ್ವರ ಹೊರಟು ಹೇಳಿತು:
      "ಅಕ್ಕಾ! ಇಲ್ಲಿರ್‍ಬೆಡಿ. ನೀವು ಕಣ್ಣನ ಮನೆಗೆ ಹೋಗಿ!" 
        ಸ್ವರ ಅಪರಿಚಿತವಾಗಿದ್ದರೂ ತನ್ನನ್ನು 'ಅಕ್ಕಾ' ಎಂದು ಕರೆದ ಹುಡುಗನನ್ನು 
   ದೇವಕಿ ಆತ್ಮೀಯತೆಯಿಂದ ನೋಡಿದಳು.
      ಕಣ್ಣನೂ ಅಪ್ಪುವೂ ಮುದುರಿಬಿದ್ದಿದ್ದ ಆ ಮನುಷ್ಯನನ್ನೆತ್ತಿ ನಡೆದರು. ದೇವಕಿ
   ಅಳು ನಿಲ್ಲಿಸಿದ ಮಗುವನ್ನೆತ್ತಿಕೊಂಡು, ಕಣ್ಣನ ಮನೆಯತ್ತ ಹೊರಟಳು.
      ಸ್ವಲ್ಪ ದೂರದಲ್ಲೇ ಜಮೀನ್ದಾರರ ತೆಂಗಿನ ತೋಟ ಆರಂಭವಾಗಿತ್ತು. 
   ಅಲ್ಲೊಂದು ತೆಂಗಿನ ಮರದ ಬಳಿ ಆ ಮನುಷ್ಯನನ್ನು ಕಣ್ಣನೂ ಅಪ್ಪುವೂ 
   ಇಳಿಯಬಿಟ್ಟರು. ಆತನ ಪಂಚೆಯನ್ನು ಬಿಚ್ಚಿ ಆ ದೇಹವನ್ನು ಮರದ ಕಾಂಡಕ್ಕೆ 
   ಬಿಗಿದರು. ಆತ ಸತ್ತಿಲ್ಲವೆಂದು ಮತ್ತೊಮ್ಮೆ ಖಚಿತಮಾಡಿಕೊಂಡು, ತಮ್ಮ ಹಾದಿ
   ಹಿಡಿದರು.
      ಕಣ್ಣನ ಮನೆಯಲ್ಲೀಗ ಅಪ್ಪು ಸಿಹಿಗಡುಬು ತಿನ್ನಲಿಲ್ಲ. ಅಲ್ಲಿ ಆತ ನಿಲ್ಲಲೇ 
   ಇಲ್ಲ. ದೀಪದ ಬೆಳಕಿನಲ್ಲಿ ದೇವಕಿಯನ್ನೂ ಮಗುವನ್ನೂ ಮತ್ತೊಮ್ಮೆ 
   ನೋಡಿದಾಗ, ಯಾವುದೋ ಭಾವಾವೇಶದಿಂದ ಅಪ್ಪುವಿನ ಕಣ್ಣುಗಳು 
   ಹನಿಗೂಡಿದವು. ಆತ "ನಾಳೆ ಸಿಗ್ತೇನೆ ಕಣ್ಣ" ಎಂದು ಹೇಳಿ, ಕತ್ತಲಲ್ಲಿ ಒಬ್ಬನೇ 
   ತನ್ನ ಮನೆಯತ್ತ ಹೊರಟುಹೋದ.
      ಮನೆಯಲ್ಲಿ ಊಟ ಮುಗಿಸಿ ಮಲಗುವ ಸಿದ್ದತೆಯಲ್ಲಿದ್ದ ತಂದೆಯಿಂದ ಪ್ರಶ್ನೆ
   ಬಂತು:
      "ಯಾಕೋ ಇಷ್ಟು ತಡ?"
      ಅಪೂರ್ವವಾದೊಂದು ಅನುಭವದ ತೆರೆಗಳ ಮೇಲೆಯೇ ಇನ್ನೂ ತೇಲುತ್ತಿದ್ದ
   ಅಪ್ಪು ಉತ್ತರವೀಯಲಿಲ್ಲ.