ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪

                                                ಚಿರಸ್ಮರಣೆ
        
        "ಬೆಳಕಾದರೂ ಹಿಡಕೊಂಡು ಬರಬಾರ್ರ್ದೇನೊ? ರಾತ್ರೆ ದೆವ್ವದ ಹಾಗೆ ಒಬ್ನೇ
      ನಡೀತಿಯಲ್ಲ?"
         ಈಗಲೂ ಮಗ ಮೌನವಾಗಿದ್ದುದನ್ನು ಕಂಡು, ಆತನಿಗೆ ಊಟಕ್ಕಿಡುತ್ತಿದ್ದ 
      ತಾಯಿ ಹೇಳಿದಳು:
        "ಹುಡುಗ ಒಂದು ಬ್ಯಾಟರಿ ತೆಗೆಸ್ಕೊಡೂಂತ ಹೋದ ವರ್ಷವೇ ಹೇಳಿದ್ದ." 
        "ಇವನೊಬ್ಬ ಬ್ಯಾಟರಿ ಹಿಡಕೊಂಡು ಬೇಟೆಗೆ ಹೊರಡೊ ದೊಡ್ಡ ಮನುಷ್ಯ. 
      ತೆಗೆಸಿಕೊಡ್ಬೇಕಾಗಿತ್ತು."
         ತಂದೆ ಹಾಗೆ ಆಡುತ್ತಿದ್ದರೂ ಆ ಹೃದಯ ಮೃದುವಾಗಿತ್ತೆಂದು ಅಪ್ಪು  ಚೆನ್ನಾಗಿ 
      ತಿಳಿದಿದ್ದ.
         "ದುಡ್ಡಿರ್ಲಿಲ್ಲ " ಎಂದಳು ತಾಯಿ ಮೆಲ್ಲನೆ ನಕ್ಕು. 
         "ಹೂಂ--" ಎಂದು ತಂದೆ ಮಾತು ನಿಲ್ಲಿಸಿದ. 
         ...ಮಲಗಿಕೊಂಡು ಬಹಳ ಹೊತ್ತಾದರೂ ಅಪ್ಪುವಿಗೆ ನಿದ್ದೆ ಬರಲಿಲ್ಲ. ಆ 
       ಪ್ರಾಣಿ ಎಲ್ಲಾದರೂ ಸತ್ತೇಹೋದರೆ? ನಾಳೆ ಗೊಂದಲವಾಗುವುದು ಖಂಡಿತ. 
       ಆದರೆ, ಅವನು ಸತ್ತಹಾಗಿರಲಿಲ್ಲ. ಉಸಿರೂ ಸ್ವಲ್ಪ ಆಡುತ್ತಿತ್ತು... ಅಂತೂ ಬೆಳಗ್ಗೆ 
       ಓಡಿ ಹೋಗಿ ಚಿರುಕಂಡನಿಗೆ ಈ ವಿಷಯ ಹೇಳಬೇಕು; ಇಬ್ಬರೂ ಹೋಗಿ 
       ಮಾಸ್ತರರಿಗೂ ತಿಳಿಸಬೇಕು.. ಆ ಕಣ್ಣ ಎಷ್ಟು ಒಳ್ಳೆಯವನು! ದೇವಕಿ ಕೂಡಾ--
       ಆ ಎಳೆಯ ಮಗುವೂ....
          ಈ ರೀತಿಯ ಯೋಚನೆಯಲ್ಲೆ ಅಪ್ಪು ನಿದ್ರಿಸಿದ.
          .... ರಾತ್ರೆ ಕಳೆಯಿತು. ನಸುಕಿನಲ್ಲೆ ಎದ್ದು ಅಪ್ಪು ಜಮೀನ್ದಾರರ ಚಾಕರ
       ನನ್ನ ತಾವು ಕಟ್ಟಿಹಾಕಿದ್ದ ದಿಕ್ಕಿಗೆ ಓಡಿ,ದೂರದಲ್ಲಿ ನಿಂತು,ಆ ಮರದತ್ತ ದೃಷ್ಟಿ
       ಹರಿಸಿದ. ಮರದ ಬುಡದಲ್ಲಿ ಏನೂ ಇರಲಿಲ್ಲ. ಆ ಮನುಷ್ಯ ಎದ್ದು
       ಹೋಗಿದ್ದನೆಂಬುದು ಸ್ಪಷ್ಟವಾಗಿತ್ತು. ಅಪ್ಪುವಿಗೆ ಹೃದಯ ಹಗುರವೆನಿಸಿತು.
       ಹಕ್ಕಿಯ ವೇಗದಲ್ಲಿ ಚಿರುಕಂಡನ ಮನೆಗೆ ಹೋಗಿ ಆತನನ್ನು ಎಬ್ಬಿಸಿದ.
          ಉದ್ವೇಗ  ತುಂಬಿದ ಧ್ವನಿಯಲ್ಲಿ ಅಪ್ಪು ಒಪ್ಪಿಸಿದ ವರದಿ ಕೇಳಿ,ಚಿರುಕಂಡನ 
       ಮುಖ ಗಂಭೀರವಾಯಿತು. ಎತ್ತ ಹೋಗಬೇಕೆಂದು ಅವರು ಮಾತನಾಡದೆ 
       ಇದ್ದರೂ, ಇಬ್ಬರ ಕಾಲುಗಳೂ ಮಾಸ್ತರಲ್ಲಿಗೇ ನಡೆದವು. ಗೆಳೆಯನ ಮೌನ ಕಂಡು 
       ಒಂದು ರೀತಿಯ ದಿಗಿಲಾಗಿ ಹಾದಿಯಲ್ಲಿ ಅಪ್ಪು ಕೇಳಿದ:   
          "ನಾವು ಹಾಗೆ ಮಾಡಿದ್ದು ತಪ್ಪಾಯ್ತಾ?" 
           ಚಿರುಕಂಡ ಯೋಚಿಸುತ್ತಿದ್ದುದೂ ಆ ವಿಷಯವನ್ನು ಕುರಿತೇ.