ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೧೭ ಗುರುತು ಸಿಗದಹಾಗೆ ಮುಖ ಮರೆಸಿ ತ್ರಿಕರಪುರಕ್ಕೆ ಪ್ರಯಾಣ ಬೆಳಸಿದರು. ಅಲ್ಲಿ ನಿಲ್ದಾಣದ ಎದುರು ಮಗ್ಗುಲಿಂದಲೇ ಧುಮುಕಿ ಹಳ್ಳಿ ಸೇರಿದರು.

 ಚಂದುವಿರಲಿಲ್ಲ. ಆತನನ್ನೂ ಆ ಊರಿನ ಇನ್ನೊಬ್ಬನನ್ನೂ ಬಂಧಿಸಿದ್ದರು.ಚಂದುವಿನ ತಂಗಿ-ಚಿರುಕಂಡನ ಹೆಂಡತಿ-ಆಗಲೇ ಅಲ್ಲಿಗೆ ಬಂದಿದ್ದಳು.ಹೊರಗೆ ಬೆಳಕು ಹರಿಯುತ್ತಿದ್ದುದನ್ನು ಕಂಡು ಆಕೆ ಅಂದಳು:
 "ಒಳಗ್ವನ್ನಿ. ಹಗಲು ಹೊತ್ತು ಗೂಢಚಾರರು ಇಲ್ಲಿ ಎದುರಿಗೆ ಕಾವಲಿರ್ತಾರೆ-ಯಾರಾದರೂ ಬರಬಹುದೂಂತ. ಇಲ್ಲಿ ಬೇರೆ ಯಾರಾದಾದರು ಮನೆ ನಿಮಗೆ ಗೊತ್ತಾ?"
  ಅಪ್ಪೂವಿಗೆ ಗೊತ್ತಿರಲಿಲ್ಲ. ಆತ ಹೇಳಿದ:
   "ಇಲ್ಲ. ನಿಮಗೆ ತೊಂದರೆಯಾಗದೇ ಇದ್ದರೆ ಹಗಲು ಇಲ್ಲೇ ಇರ್ತೇವೆ. ರಾತ್ರೆ ನಾವು ನೀಲೇಶ್ವರಕ್ಕೆ ಹೋಗ್ಬೇಕು."
   ಚಂದುವಿನ ತಾಯಿಯೆಂದಳು:
   "ನಮಗೆಂಥ ತೊಂದರೆ? ಚಂದು ಬೇರೆ ನೀವು ಬೇರೇನಾ? ನೀವೆಲ್ಲ ನನ್ನ ಮಕ್ಕಳೇ ಅಲ್ಲವಾ? ಇಲ್ಲಿದ್ದರೆ ಏನಾದರೂ ನಿಮಗೆ ಕೇಡು ತಟ್ಟೀತೇನೋ ಅಂತ ಮಗಳು ಹಾಗಂದ್ಲು."
   ಆ ಸಂಭವವಿತ್ತು ನಿಜ. ಆದರೆ ಬೇರೆ ಸ್ಥಳವಿರಲಿಲ್ಲ. ಹೀಗಾಗಿ ಅಪ್ಪು ಅಬೂಬಕರ್ ಹಗಲು ಅಲ್ಲೇ ಉಳಿದರು.ಕಲ್ಲು ಮುಳ್ಳು ತಗಲಿ  ಬೊಬ್ಬೆ ಎದ್ದು ಒಡೆದು, ಊದಿಕೊಂಡು ಉರಿಯುತ್ತಿದ್ದ ಪಾದಗಳನ್ನು ಬಿಸಿನೀರಲ್ಲಿ ತೊಳೆದು ಎಣ್ಣೆ ಸವರಿದರು. ಊಟಮಾಡಿ, ನಿದ್ದೆ ಹೋದರು. ಆ ದಿನವೆಲ್ಲ ಹೆಚ್ಚಾಗಿ ಬಾಗಿಲ ಬಳಿಯಲ್ಲೇ ಕುಳಿತ ಚಿರುಕಂಡನ ಹೆಂಡತಿಯೂ ಆಕೆಯು ತಮ್ಮನೂ ಅವರಿಗೆ ಕಾವಲಾದರು.
  ಅಪ್ಪು ಎದ್ದೊಡ್ಡನೆ ಏನೇನೋ ಪ್ರಶ್ನೆಗಳನ್ನು ಕೇಳಬೇಕೆನ್ನಿಸಿತ್ತು ಆಕೆಗೆ. ಎಷ್ಟು ಪ್ರಶ್ನೆಗಳು? ಒಂದು, ಎರಡು, ಮೂರು-ನೂರು. ಎಣಿಕೆಗೆ ಸಿಗದಷ್ಟು. ಆದರೆ, ಕತ್ತಲಾಯಿತೇನೋ ಎಂದು ಅಪ್ಪು ಗಾಬರಿಯಾಗಿ ಎದ್ದು ಕಣ್ಣು ಹೊಸಕಿಕೊಂಡಾಗ, ಆಕೆ ಏನನ್ನೂ ಕೇಳಲಿಲ್ಲ.
  ಹಿತ್ತಿಲಿಗಿಳಿದು, ಬೇಲಿ ಹಾರಿ, ಬೀದಿ ಸೇರಿ ಅವರು ಮತ್ತೆ ನಡೆದರು. ಕಾಲುಗಳು ಅವರನ್ನು ಹೊತ್ತು ಮುಂದೆ ಹೋದುವೋ ಅವರು ಕಾಲುಗಳನ್ನು ಎಳೆದು ಮುಂದಕ್ಕೆ ಒಯ್ದರೋ ಹೇಳುವುದು ಕಷ್ಟ...ಚರ್ವತ್ತೂರು...ಮತ್ತೂ ಉತ್ತರಕ್ಕೆ ನಡೆದರೆ ನೀಲೇಶ್ವರ. ತೇಜಸ್ವಿನಿ ಅಡ್ಡವಾಗಿತ್ತು. ರೈಲು ಸೇತುವೆಯ ಮೇಲೆ ಕತ್ತಲಲ್ಲಿ