ಈ ಪುಟವನ್ನು ಪರಿಶೀಲಿಸಲಾಗಿದೆ

೨೬೪ ಚಿರಸ್ಮರಣೆ
ಹಾಗೆಯೇ ಗೋಡೆಗೊರಗಿ ಕುಳಿತ ಸ್ಥಿತಿ, ಯಾರೂ ಮಸಕು ಮಸಕಾಗಿ ಎದುರು
ನಿಂತಂತೆ ಕಂಡಿತು. ಎಲ್ಲವೂ ಬಿಳಿ, ಹೆಂಗಸು, ಮಗು.
"ಜಾನಕಿ!” ಎನ್ನುತ್ತ ಅಪ್ಪು ಧಿಗ್ಗನೆದ್ದು ಕುಳಿತ.
ಅದು ಕನಸಾಗಿರಲಿಲ್ಲ. ಪುಟ್ಟ ಮಗನನ್ನು ಕೈಹಿಡಿದು ನಿಲ್ಲಿಸಿಕೊಂಡು
ಜಾನಕಿಯೇ ಅಲ್ಲಿದ್ದಳು.
"ಅಪ್ಪಾ! ಅಮ್ಮಾ!"
ಮಗನ ಜತೆಯಲ್ಲಿ ಸೆರೆಮನೆಯ ಸುಖ ಅನುಭವಿಸಿ ಹಿಂತಿರುಗಿದ್ದ ತಂದೆ,
ತಾಯಿಯೊಡನೆ ಇಲ್ಲಿಗೆ ಬಂದಿದ್ದ.
ಎದ್ದು ನಿಂತು ಅಪ್ಪು ಬಾಗಿಲ ಬಳಿಗೆ ಬಂದ, ತೆಳುಮೀಸೆ, ಕೆನ್ನೆಗಲ್ಲಗಳನ್ನು
ಆವರಿಸಿದ್ದ ತೆಳುಗಡ್ಡ
ಮಗನನ್ನು ನೋಡುತ್ತ ತಾಯಿ ಬಿಕ್ಕಿಬಿಕ್ಕಿ ಅತ್ತಳು.
"ಯಾಕಮ್ಮ ಅಳ್ತೀಯಾ?”
ತಂದೆಯೆಂದ-ನಿನಗಿನ್ನೂ ಅನುಭವ ಸಾಲದು ಎನ್ನುವ ಧ್ವನಿಯಲ್ಲಿ:
"ನೀನು ಸುಮ್ಮಿರು ಅಪ್ಪು, ಅಳಲಿ."
ಆ ತಾಯಿ ಅಂದಳು:
“ಹೆತ್ತ ತಾಯಿ ಹತ್ತಿರ ಯಾವತ್ತಾದರೂ ಕಣ್ಣೀರು ಕಡಿಮೆಯಾಗ್ತದಾ ಮಗಾ?”
ಜಾನಕಿ ಮಗುವನ್ನೆತ್ತಿಕೊಂಡಳು. ಮುರು ವರ್ಷದ ಪುಟ್ಟ ಹುಡುಗ ತಂದೆಯ
ಮುಖ ನೋಡಿದ. ಪರಿಚಿತನಲ್ಲ. ಅಜ್ಜಿಯ ಅಜ್ಜನ ಮುಖ ನೋಡಿದ. ಆ
ಮುಖಾಭಾವಗಳು ಇಷ್ಟವಾಗಲಿಲ್ಲ. ತಾಯಿಯನ್ನು ನೋಡಿದ. ಅಲ್ಲಿಯೂ
ಕಣ್ಣುಗಳು ತುಂಬಿ ಬಂದಿದ್ದುವು. ಇದೊಂದನ್ನೂ ತಾನು ಸಹಿಸೆನೆಂಬಂತೆ ಗಟ್ಟಿಯಾಗಿ
ಅತ್ತ. ಅಪ್ಪುವಿಗೂ ಅಳುವ ಹಾಗಾಯಿತು.
ಅಲ್ಲಿಯೇ ದೂರದಲ್ಲಿ ಕುಳಿತಿದ್ದ ಜೇಲಿನೊಬ್ಬ ಅಧಿಕಾರಿಯನ್ನೂ ನಿಂತಿದ್ದ
ಪಹರೆಯವನನ್ನೂ ಅಪ್ಪು ನೋಡಿದ. ತಾನು ಕ್ರಾಂತಿಕಾರನೆಂಬುದನ್ನು ನೆನಪಿಗೆ
ತಂದುಕೊಳ್ಳುತ್ತ ಅಪ್ಪು ಮನಸ್ಸು ಬಿಗಿಹಿಡಿದು, ಹೆಂಡತಿಯನ್ನು ಕೇಳಿದ :
“ಮಗೂಗೆ ಏನು ಹೆಸರಿಡ್ಬೇಕು ಕೊನೆಗೂ ತೀರ್ಮಾನ ಮಾಡಿದಿರಿ ಜಾನಕಿ?”
“ಅಪ್ಪು ಕುಟ್ಟಿ ಅಂತಲೇ."
“ನಿನ್ನ ಮಗೂಗೆ ಇನ್ನೇನು ಹೆಸರಪ್ಪಾ ಇಡೋದು?” ಎಂದು ತಾಯಿ,
ಕಂಬನಿಯೊರೆಸಿಕೊಳ್ಳುತ್ತಾ, ಸೊಸೆಯ ಮಾತನ್ನು ಸಮರ್ಥಿಸಿ ಅಂದಳು.