ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೪೦ ಚಿರಸ್ಮರಣೆ ಹುಡುಗರಿಗೆ ಆಶ್ಚರ್ಯವೆನಿಸಿತು. ಮೌನ. ಹಸುರು ಗಿಡಮರಗಳನ್ನು ಸವರಿಕೊಂಡು ಮೆಲ್ಲನೆ ಬೀಸುತ್ತಿದ್ದ ತಂಗಾಳಿ, ಮೇಲೆ ಎತ್ತರದಲ್ಲಿ ತೆಂಗಿನಮರದ ಸೋಗೆ ಎಲೆಗಳ ಕಚಕಚ ಸದ್ದು. ಹುಡುಗರತ್ತ ತಿರುಗಿ ಮಾಸ್ತರು ಹೇಳಿದರು: "ಇವರೇ ಕಣ್ರೋ, ಪರಿಚಯ ಮಾಡಿಸಿಕೊಡ್ತೇನೇಂತ ಹೇಳಿದ್ದೆ ನೋಡು. ಇವರೇ." ಅನಿರೀಕ್ಷಿತವಾಗಿ ತಮ್ಮನ್ನು ಉದ್ದೇಶಿಸಿ ಬಂದ ಆ ಮಾತನ್ನು ಕೇಳಿ ಹುಡುಗರಿಗೆ ಆಶ್ಚರ್ಯವಾಯಿತು. ಮಾಸ್ತರರ ದೃಷ್ಟಿ ತೋರಿಸುತ್ತಿದ್ದ ವ್ಯಕ್ತಿಯನ್ನು ಅವರು ಮತ್ತೊಮ್ಮೆ ನೋಡಿದರು. ಎವೆ ಇಕ್ಕದೆ ನೋಡಿದರು. ತಾವು ಕಾಣಲು ಬಂದುದು ಆ ವ್ಯಕ್ತಿಯನ್ನೇ ಎಂದು ತಿಳಿದಾಗ ಅಪ್ಪು ಮತ್ತು ಚಿರುಕಂಡ ಇಬ್ಬರಿಗೂ ನಿರಾಶೆಯಾಯಿತು. ಎತ್ತರದ ದೇಹದ, ಬಲವಾದ ತೋಳುಗಳ, ಬೆಲೆಬಾಳುವ ಉಡುಪಿನ, ಹುರಿಮಾಡಿದ ಮೀಸೆಯ, ಭಯ ಹುಟ್ಟಿಸುವ ಕಣ್ಣುಗಳ, ಗಂಭೀರ ಧ್ವನಿಯ-ತಮ್ಮ ಕಲ್ಪನೆಯ ವ್ಯಕ್ತಿಗೂ ಇವರಿಗೂ ಹೋಲಿಕೆಯೇ ಇರಲಿಲ್ಲ! ಹುಡುಗರ ಯೋಚನೆಗಳನ್ನು ಊಹಿಸಿಕೊಂಡವರಂತೆ ಆ ವ್ಯಕ್ತಿ ಅಂದರು: "ಜೋರಾದ ಆಸಾಮಿ ಯಾರಾದರು ಇರ್ತ್ತಾರೇಂತ ಭಾವಿಸಿದ್ದಿರಿ, ಅಲ್ವ?" ಹುಡುಗರಿಬ್ಬರೂ ಹಲ್ಲುಕಿಸಿದು ನಕ್ಕರು. ಹಾಗೆ ತಪ್ಪಾಗಿ ಯೋಚಿಸಿ ಅಪಹಾಸ್ಯಕ್ಕೆ ಗುರಿಯಾದೆವಲ್ಲ ಎಂದು ಅವರಿಗೆ ನಾಚಿಕೆಯಾಯಿತು. ತಮ್ಮ ಮನಸ್ಸಿನಲ್ಲಿದ್ದುದನ್ನು ಅವರು ಅಷ್ಟು ಸರಿಯಾಗಿ ತಿಳಿದರಲ್ಲ ಎಂದು ಆಶ್ಚರ್ಯವಾಯಿತು. ಮಾಸ್ತರಿಗಿಂತಲೂ ದೊಡ್ಡವರಾದ ವ್ಯಕ್ತಿ ಯಾವ ಭಯಕ್ಕೂ ಆಸ್ಪದವಿಲ್ಲದ ಹಾಗೆ ಸಾದಾ ಮನುಷ್ಯನಾಗಿದ್ದುದನ್ನು ಕಂಡು, ಅವರಿಗೆ ಸಂತೋಷವಾಯಿತು. ಹುಡುಗರು ಅಪ್ಪು ಯಾರು, ಚಿರುಕಂಡ ಯಾರು, ಎಂಬುದನ್ನು ಮಾಸ್ತರು 'ಅವರಿಗೆ' ತಿಳಿಸಿದರು. ಅವರ ತಾಯಿತಂದೆಯರ ಪರಿಚಯವನ್ನೂ ಮಾಡಿಕೊಟ್ಟರು. "ಚಿರುಕಂಡ ತಾಯಿತಂದೆಯರ ಒಬ್ಬನೇ ಮಗ. ಇವನಿಗಿರೋದು ಒಳ್ಳೇ ಮೆದುಳು. ಅಪ್ಪುವಿಗಿರೋದು ಒಳ್ಳೇ ಹೃದಯ. ಇವನಿಗಿಬ್ಬರು ತಮ್ಮಂದಿರು ಇದ್ದಾರೆ. ತಂದೆ ಸ್ವಲ್ಪ ಕುಡಿಯೋದು ಹೊಡೆಯೋದು ಜಾಸ್ತಿ..." ಅವರು ಹಾಗೆ ಹೇಳಿ, ಅಪ್ಪುವಿನತ್ತ ತಿರುಗಿ"ಅಲ್ವೇನೋ?"ಎಂದರು. ಎಲ್ಲರೂ ತನ್ನನ್ನೇ ನೋಡಿ ನಗುತ್ತಿದ್ದಂತೆ ಆತನಿಗೆ ಭಾಸವಾಯಿತು. 'ಇದನ್ನೆಲ್ಲ ಹೇಳದೇ ಇದ್ದರೆ ಏನಾಗುತ್ತಿತ್ತೊ?"ಎಂದು ಮನಸ್ಸು ಮುನಿಸು ತೋರಿತು.