ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೪೧

  ಅಷ್ಟರಲ್ಲೆ ಮಾಸ್ತರು ಮಧುರವಾದೊಂದು ಬೇರೆಯ ಮಾತನ್ನೂ ಹೇಳಿದರು: 
  "ಆದರೆ ಇವನ ತಾಯಿ ಬಹಳ ಒಳ್ಳೆಯವರು." 
   ಅದನ್ನು ಕೇಳಿ, ಸಂತೋಷದಿಂದ ಲಜ್ಜೆಯಿಂದ ಅಪ್ಪುವಿನ ಮುಖ ಬೆಳಗಿತು.  
   ಇಷ್ಟಾದರೂ ಮಾಸ್ತರು 'ಅವರ' ಹೆಸರು ಹೇಳಿರಲಿಲ್ಲ. 'ಹೇಳೋದನ್ನ ಮರೆತುಬಿಟ್ಟರೇನೋ. ನಾವಾಗಿಯೇ ಕೇಳಿದರೆ ಏನಾಗ್ತದೆ?' ಎಂದು ಒಳ್ಳೆಯ ಮೆದುಳಿನ ಚಿರುಕಂಡ ಯೋಚಿಸಿದ.

ಆದರೆ ಅಂತಹ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ಆ ವ್ಯಕ್ತಿಯೇ ಹುಡುಗರನ್ನು ನೋಡುತ್ತ ಅಂದರು: "ನನ್ನ ಹೆಸರು ನಿಮಗೆ ಗೊತ್ತಿಲ್ಲ ಅಲ್ವೆ?-ಪಂಡಿತ ಅಂತ." "ಪಂಡಿತರೆಂದರೆ ಅಳಲೇಕಾಯಿ ಪಂಡಿತರಲ್ಲ!" ಧಾಂಡಿಗ ಆ ನಗೆ ಮಾತನ್ನಾಡಿ, ತಾನೇ ಬಿದ್ದುಬಿದ್ದು ನಕ್ಕ. ಉಳಿದವರಿಗೂ ನಗು ಬಂತು. ಮಾಸ್ತರು ವಿವರಿಸಿ ಹೇಳಿದರು: "ಪಂಡಿತರು ಅಂದರೆ, ತಿಳಿದೋರು ಅಂತ ಅಲ್ವ? ಔಷಧಿ ಕೊಡೋರು ಅಂದರೂ ತಪ್ಪೇನೂ ಅಲ್ಲ. ಆದರೆ ಇವರು ಔಷಧಿ ಕೊಡೋದು ಮನುಷ್ಯನ ಕಾಯಿಲೆಗಲ್ಲ-ಸಮಾಜದ ಕಾಯಿಲೆಗೆ! ಅರ್ಥವಾಯ್ತೇನ್ರೋ?" ಅರ್ಥವಾಯ್ತೇನ್ರೋ?-ಎಂಬುದು ಅವರ ಪ್ರೀತಿಯ ಪ್ರಶ್ನೆ. ಪದೇಪದೇ ಅವರು ಹಾಗೆ ಕೇಳುತ್ತಿದ್ದುದರಿಂದ ಶಾಲೆಯ ಹುಡುಗರು ತಾವೇ ಇದ್ದಾಗ ತಮ್ಮೊಳಗೆ ಅದೇ ಪ್ರಶ್ನೆ ಕೇಳಿಕೊಂಡು ನಗುವುದಿತ್ತು. ಹುಡುಗರ ಆ ನಗೆಯ ಕಾರಣವನ್ನು ಮೊದಲ ಸಾರೆ ತಿಳಿದಾಗಲೂ ಮಾಸ್ತರು ಸಿಟ್ಟಾಗಿರಲಿಲ್ಲ. ಆಮೇಲೆಯೂ ಅವರು ಆಕ್ಷೇಪಿಸಿರಲಿಲ್ಲ. ಈಗ ಅದರ ನೆನಪಾಗಿ ಅಪ್ಪುವಿಗೆ ನಗು ಬಂತು. ಆದರೆ ಚಿರುಕoಡ'ಸಮಾಜದ ಕಾಯಿಲೆಗೆ ಔಷಧಿ ಕೊಡೋ ಪಂಡೀತರು' ಎಂಬ ಅರ್ಥಪೂರ್ಣ ಮಾತಿಗಾಗಿ ತಲೆದೂಗಿದ. ಅದನ್ನು ಹೇಳಿದ ಮಾಸ್ತರರ ಬಗೆಗೆ ಅವನ ಗೌರವ ಹೆಚ್ಚಿತು. ಪಂಡಿತರು ಅಪ್ಪುವನ್ನುದ್ದೇಶಿಸಿ ಕೇಳಿದರು: "ನಿನ್ನ ತಮ್ಮಂದಿರ ಹೆಸರೇನು ಅಪ್ಪು ?" ಅದು ಏನೇನೂ ಮಹತ್ವವಿಲ್ಲದ ಪ್ರಶ್ನೆಯಾಗಿ ಅಪ್ಪುವಿಗೆ ತೋರಿತು. ಆದರೂ ಆತ ಹೆಸರು ಹೇಳಿದ. ಅದರ ಜತೆಯಲ್ಲೆ ಒಂದು ಮಾತು ಸೇರಿಸಿದ: "ಅವರು ನನಗಿಂತ ತುಂಬಾ ಚಿಕ್ಕೋರು."