ಸ್ಟೇಡಿಯಂಗಳೂ, ದೊಡ್ಡ ಬಹುಮಾನದ ಸ್ಪರ್ಧೆಗಳೂ ಪ್ರಸಿದ್ದ. ಕತ್ತಿ ಕಟ್ಟಿದ ಕೋಳಿಗಳ ಜಗಳವಾದ ಕೋಳಿ ಅಂಕ ಇನ್ನೊಂದು ಪ್ರಾಚೀನ ವಿನೋದ. ತೆಂಗಿನಕಾಯಿಗಳನ್ನು ಉರುಳಿಸಿ ಅಥವಾ ಕೈಯಲ್ಲಿ ಹಿಡಿದು ಒಂದಕ್ಕೊಂದು ತಾಗಿಸಿ ಒಡೆಯುವ ಆಟ ಒಂದು ಸ್ಪರ್ಧೆ. ಈ ಸ್ಪರ್ಧೆಗಳಲ್ಲಿ ಪಂದ್ಯವಾಗಿ ಹಣದ ಜೂಜು ಇರುತ್ತದೆ ಹಾಗೆಯೇ ಒಂದೊಂದು ಜಾತಿ, ವರ್ಗಗಳಿಗೂ, ಮತೀಯ ಪಂಗಡಗಳಿಗೂ ತಮ್ಮದಾದ ಆಚರಣೆಗಳು, ನಂಬಿಕೆಗಳು, ತತ್ಸಂಬಂಧಿ ಸಾಹಿತ್ಯ-ಕಲಾ ಪ್ರಕಾರಗಳು ಇವೆ. ಈ ಜಿಲ್ಲೆಯ ರಂಗೋಲಿ ಮತ್ತು ಇತರ ಆಚರಣಾತ್ಮಕ ಚಿತ್ರ ಶೈಲಿಗಳು ಅಭ್ಯಾಸ ಯೋಗ್ಯ. ಇಲ್ಲಿಯ ಆಚರಣೆಗಳಲ್ಲಿ, ದೇವಾಲಯ ಶಿಲ್ಪಗಳಲ್ಲಿ, ಕಲಾಪ್ರಕಾರಗಳಲ್ಲಿ ಕಾಣುವ ಚಿತ್ರಶಿಲ್ಪ ವಿಧಾನಗಳ ಪರಂಪರೆಯ ಮುಂದುವರಿಕೆಯಾಗಿ ಉತ್ತಮ ಮಟ್ಟದ ಚಿತ್ರಕಲಾವಿದರು ಇಲ್ಲಿ ರೂಪುಗೊಂಡಿದ್ದಾರೆ.
ಹರಿಕಥೆಯ ಮಾಧ್ಯಮಕ್ಕೆ ಈ ಜಿಲ್ಲೆ ಒಳ್ಳೆಯ ರಂಗ ಒದಗಿಸಿದೆ. ಆಚಾರ್ಯ ಮಧ್ವರ ಕಾಲದಲ್ಲಿ ಇಲ್ಲಿ ಪ್ರಕರ್ಷಕ್ಕೆ ಬಂದ ದಾಸಕೂಟದ ಪ್ರಭಾವದಿಂದ ಪುಷ್ಟಿಕೊಂಡ ಈ ಕಲಾಪ್ರಕಾರಕ್ಕೆ ಇಲ್ಲಿ ಒಳ್ಳೆಯ ಪ್ರೋತ್ಸಾಹವಿತ್ತು. ಈ ಪ್ರಕಾರವು ಇದೀಗ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದರೂ ಈ ಜಿಲ್ಲೆ ಕೆಲವು ಉತ್ತಮ ಕೀರ್ತನಕಾರರನ್ನು ನೀಡಿದೆ. ಪುರಾಣ ಪ್ರವಚನ (ಗಮಕ ಮತ್ತು ವ್ಯಾಖ್ಯಾನ) ಪ್ರಕಾರಕ್ಕೂ ಇಲ್ಲಿ ಶತಮಾನಗಳ ಇತಿಹಾಸವಿದ್ದು ನೂರಾರು ಭಜನಾ ಮಂಡಳಿಗಳು ಸಕ್ರಿಯವಾಗಿದ್ದು, ಅವುಗಳಲ್ಲಿ ಹೊಸ ಮತ್ತು ಹಳೆಯ ಶೈಲಿಯು ಭಜನೆಯು ಹಾಡುವಿಕೆಗಳನ್ನು ಕೇಳಬಹುದು.
ಹಿಂದೆ ಈ ಜಿಲ್ಲೆಯ ಹಲವು ದೇವಾಲಯಗಳಲ್ಲಿ ರೂಢಿಯಲ್ಲಿದ್ದ ದೇವದಾಸಿ ನೃತ್ಯವು ಈಗ ಮರೆಯಾಗಿದೆ. ಆದರೆ ಭರತನಾಟ್ಯ ಕಲೆಗೆ ಒಳ್ಳೆಯ ಪ್ರೋತ್ಸಾಹವಿದ್ದು ಹತ್ತಾರು ಶಿಕ್ಷಕರು ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ಶಾಸ್ತ್ರೀಯ ಸಂಗೀತಕ್ಕು ಇಲ್ಲಿ ಸುದೀರ್ಘ ಪರಂಪರೆ ಇದ್ದು ಕರ್ನಾಟಕ ಮತ್ತು ಹಿಂದುಸ್ತಾನಿಗಳೆರಡೂ ಪ್ರೋತ್ಸಾಹವಿದೆ. ಚರ್ಚ್ ಸಂಗೀತದ ಮೂಲಕ ಇಲ್ಲಿಗೆ ಬಂದು ಪಾಶ್ಚಾತ್ಯ ಸಂಗೀತವೂ ಪಾಶ್ಚಾತ್ಯ ನೃತ್ಯವೂ ಜನಪ್ರಿಯವಾಗಿ ಬೆಳೆದಿದೆ.
45