ಈ ಪುಟವನ್ನು ಪ್ರಕಟಿಸಲಾಗಿದೆ
ಶಿಕ್ಷಣ

ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈದಿರುವ ದಕ್ಷಿಣ ಕನ್ನಡವು ಈ ಕ್ಷೇತ್ರದಲ್ಲಿ ರಾಜ್ಯದಲ್ಲಿ ಅತ್ಯಂತ ಮುಂದುವರಿದ ಜಿಲ್ಲೆಯಾಗಿದೆ. ಸಾಕ್ಷರತಾ ಯೋಜನೆಯಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿದ ಜಿಲ್ಲೆಯೂ ಆಗಿದೆ. ಸಾಂಪ್ರಾದಾಯಿಕ ಶಿಕ್ಷಣ, ಐಗಳ ಮಠದ ಶಿಕ್ಷಣಗಳಿಂದ ಮುಂದುವರಿದು, ಪಾಶ್ಚಾತ್ಯ ಮಿಶನರಿಗಳ ಮೂಲಕ ಆಧುನಿಕ ಶಿಕ್ಷಣದ ಸ್ಪರೂಪದ ಅರಂಭವನ್ನು ಕಂಡ ಈ ಜಿಲ್ಲೆಯಲ್ಲಿ ಪ್ರಾಥಮಿಕದಿಂದ ವಿಶ್ವವಿದ್ಯಾಲಯದವರೆಗೆ ವಿದ್ಯಾ ಕೇಂದ್ರಗಳಿವೆ. ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌, ಹೋಟೇಲ್ ಮ್ಯಾನೇಜ್‌ಮೆಂಟ್‌, ಫಿಸಿಯೋಥೆರಪಿ, ಪ್ಯಾಶನ್ ತಾಂತ್ರಿಕತೆವರೆಗೂ, ಅಂಗವಿಕಲ ಶಾಲೆಯಿಂದ ತೊಡಗಿ, ಕಲಾಶಿಕ್ಷಣ ಶಾಲೆಗಳವರೆಗೂ, ಕುಶಲ ಕರ್ಮಿ ಶಿಕ್ಷಣದಿಂದ ಯೋಗ ಶಿಕ್ಷಣದ ತನಕವೂ ವಿಶಾಲ ವ್ಯಾಪ್ತಿಯ ಶಿಕ್ಷಣ ಕ್ಷೇತ್ರವಿದ್ದು, ದೇಶ ವಿದೇಶಗಳಿಗೆ ಮಾನವ ಸಂಪನ್ಮೂಲವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಿದೆ.

ಖಾಸಗಿ ಸಾಹಸಕ್ಕೆ ಹೆಸರಾದ ಈ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ವಲಯವೂ ಅತ್ಯಂತ ಬಲಿಷ್ಠವಾಗಿದೆ. ಜೊತೆಗೆ ಸರಕಾರಿ ಶಿಕ್ಷಣ ಕ್ಷೇತ್ರವೂ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಂದಿದೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಥೋಲಿಕ್ ಬೋರ್ಡ್, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಕೆನರಾ ಹೈಸ್ಕೂಲ್ ಎಸೋಷಿಯೇಶನ್ ಮತ್ತು ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವು ಪ್ರಮುಖವಾದವುಗಳು.

46