ಈ ಪುಟವನ್ನು ಪ್ರಕಟಿಸಲಾಗಿದೆ
  • ದಕ್ಷಿಣ ಕನ್ನಡದ ಪಾಕ ಮತ್ತು ರುಚಿ ವೈವಿಧ್ಯವು ಗಮನಾರ್ಹ. ಉಡುಪಿ ಶಿವಳ್ಳಿ ಬ್ರಾಹ್ಮಣರ ಶೈಲಿಯ ಅಡುಗೆಯ ರುಚಿ ಜಗತ್ಪಸಿದ್ದ. ಈ ಶೈಲಿಯಲ್ಲಿರುವ ವೈವಿಧ್ಯ, ಒಂದೊಂದೇ ವಸ್ತುವಿನಿಂದ ತಯಾರಾಗುವ ಹಲವು ಬಗೆಯ ಪಾಕಗಳು ವಿಶಿಷ್ಟ, ಕೋಟ, ಕರ್‍ಹಾಡ, ಗೌಡಸಾರಸ್ವತ, ಹವ್ಯಕ ಬ್ರಾಹ್ಮಣ ವರ್ಗಗಳೂ, ಜೈನ, ಗೌಡ, ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಜನಾಂಗಗಳೂ ವಿಶಿಷ್ಟ ರುಚಿ ವೈಶಿಷ್ಟ್ಯಗಳನ್ನು ಹೊಂದಿವೆ. ಅಂತೆಯೆ ದಲಿತ ವರ್ಗಗಳೂ ತಮ್ಮ ಪಾಕ ವೈಶಿಷ್ಯಗಳನ್ನುಳಿಸಿಕೊಂಡಿದೆ.
  • ಕರಾವಳಿಯ ಮೀನು, ಮಂಗಳೂರಿನ ಹಂಚು, ಬೀಡಿ, ಕಾರ್ಕಳದ ಕರಿಶಿಲೆ, ಪುತ್ತೂರಿನ ಅಡಿಕೆ, ಸುಳ್ಯದ ರಬ್ಬರ್, ಕುಂದಾಪುರದ ಭತ್ತದ ಕೃಷಿ, ಮೂಡಬಿದರೆಯ ಅನನಾಸು, ಉಡುಪಿ-ಮಂಗಳೂರುಗಳ ಮಲ್ಲಿಗೆ, ಉಡುಪಿಯ ಗುಳ್ಳಬದನೆ, ಮಿಜಾರಿನ ಕಾಡುಹೀರೆಕಾಯಿ.
  • ಉಡುಪಿಯ ಅಷ್ಟಮಠಗಳು, ಕಾರ್ಕಳ ಮೂಡಬಿದಿರೆಗಳ ಜೈನ ಶಿಲ್ಪ ಕಲಾಕೃತಿಗಳು, ವೇಣೂರು, ಕಾರ್ಕಳ, ಧರ್ಮಸ್ಥಳಗಳ ಗೊಮ್ಮಟ ವಿಗ್ರಹಗಳು, ಮಂಗಳೂರಿನ ಕೆಲವು ಕ್ರೈಸ್ತ ದೇವಾಲಯಗಳ ವಾಸ್ತು ವಿನ್ಯಾಸ—ಮೊದಲಾದವು ಎತ್ತಿ ಹೇಳಬಹುದಾದ ಕೆಲವು ವೈಶಿಷ್ಟ್ಯಗಳು.
  • ಈ ಪ್ರದೇಶದಾದ್ಯಂತ ಇರುವ ಭೂತಾಲಯ, ನಾಗಬನಗಳು, ಹಲವಾರು ಶಕ್ತಿ (ದೇವೀ) ಆರಾಧನಾ ಸ್ಥಳಗಳು, ನಾಗ ಕ್ಷೇತ್ರಗಳು, ಇಲ್ಲಿಯ ಹಳೆಯ ಮತಾಚಾರಗಳನ್ನು ಪ್ರತಿನಿಧಿಸುತ್ತಿವೆ. ಮಧೂರಿನಿಂದ ಹಟ್ಟಿಯಂಗಡಿಯ ತನಕ ಇರುವ ಹಲವು ಗಣಪತಿ ದೇವಸ್ಥಾನಗಳು, ಈ ಪ್ರದೇಶವು ಒಂದು ಕಾಲದಲ್ಲಿ ಗಾಣಪತ್ಯ ಮತದ ಪ್ರಬಲ ಕೇಂದ್ರವಾಗಿದ್ದನ್ನು ಸೂಚಿಸುತ್ತವೆ. ಹಲವು ಕಡೆ ದರ್ಶನ (ಆವೇಶ-ನುಡಿ)ಗಳು ನಡೆಯುತ್ತಿದ್ದು ಇತ್ತೀಚೆಗೆ ಇವುಗಳ ಸಂಖ್ಯೆ ಹೆಚ್ಚುತ್ತಿದೆ. ದೇವಾಲಯ ಭೂತಾಲಯಗಳ ನವೀಕರಣ, ನೂತನ ಮಂದಿರ ನಿರ್ಮಾಣ, ಮತಾಚಾರಗಳ ಪುನರುಜ್ಜೀವನ, ಹೊಸ ಕ್ಷೇತ್ರಗಳ ನಿರ್ಮಾಣ ದೊಡ್ಡ ಪ್ರಮಾಣದಲ್ಲಿ ಆಗಿವೆ.
  • ವಿಸ್ತರಿಸಿರುವ ಅರ್ಥ ಮಂಡಲ, ಕಿರು ಉದ್ಯಮಗಳು, ಕೃಷಿ, ಪರ ಊರುಗಳ ಉದ್ಯೋಗಿ-ಉದ್ಯಮಿಗಳಿಂದ ಬರುತ್ತಿರುವ ಆದಾಯ- ಇವುಗಳಿಂದಾಗಿ ಈ ಪ್ರದೇಶದಲ್ಲಿ ಸಾಮಾನ್ಯ ಜೀವನ ಮಟ್ಟ ಬಹಳಷ್ಟು ಸುಧಾರಿಸಿದೆ.

56