ಈ ಪುಟವನ್ನು ಪ್ರಕಟಿಸಲಾಗಿದೆ

ಪತ್ರಿಕೆಗಳ ತುಂಬಾ ವಿದ್ಯಾಭ್ಯಾಸದ ಹೊಸ ಸುಧಾರಣೆಗಳ ವಾರ್ತೆಯೇ ಬರುತಿತ್ತು, ತೀವ್ರ ಚರ್ಚೆಗಳು, ಭಾಷಣಗಳು...

ವಿದ್ಯಾಭ್ಯಾಸದಲ್ಲಿ ಸುಧಾರಣೆಯೆಲ್ಲ ದೂರದ ಕನಸು ಎಂದು ಭಾವಿಸಿದ್ದವರು ಕಣ್ಣು ಹೊಸಕಿಕೊಂಡು, ಹೊತ್ತು ಎಷ್ಟೀಗ–ಎಂದು ಕೇಳುವಂತಾಯಿತು.

ಜಯದೇವನೂ ಆಸಕ್ತಿವಹಿಸಿ ಸಮೂಲಾಗ್ರವಾಗಿ ವಿವರಗಳನ್ನು ಅಭ್ಯಾಸ ಮಾಡಿದ. ಮೊದಲಹಂತದಲ್ಲಿ ಆರುವರ್ಷಗಳ ತನಕ ಹಳ್ಳಿಗಾಡಿನ ಶಿಕ್ಷಣ, ಆ ಬಳಿಕ ವಿದ್ಯಾರ್ಥಿಯನ್ನು ಸ್ವಾವಲಂಬಿಯಾಗಿ ಸ್ವಯಂಪೂರ್ಣನಾಗಿ ಮಾಡುವ ಯತ್ನ: ಮೆಟ್ರಿಕ್ ಪರೀಕ್ಷೆಯ ಬದಲು, ಕಾಲೇಜಿನ ಮೊದಲ ಎರಡು ವರ್ಷಗಳನ್ನೂ ಸೇರಿಸಿ ದ್ವಿತೀಯ ಹಂತದ ಏರ್ಪಾಟು. ಅಲ್ಲಿಯವರೆಗೂ ಮಾತೃಭಾಷೆಯ ಮಾಧ್ಯಮ. ಆ ಬಳಿಕ ಪ್ರೌಢ ವಿದ್ಯಾಭ್ಯಾಸ... ಸರಿಯೋ ತಪ್ಪೋ—ಅಂತೂ ಅದು ಆಕರ್ಷಕವಾಗಿತ್ತು.

ನಂಜುಂಡಯ್ಯನ ವಿಮರ್ಶೆಯ ದೃಷ್ಟಿ ಬೇರೆಯೂ ಕೆಲ ವಿಷಯಗಳನ್ನು ಗುರುತಿಸಿತು. ಇದರ ಉದ್ದೇಶವೇನು? ದ್ವಿತೀಯ ಹಂತದಲ್ಲೆ ಸ್ವಾವಲಂಬಿಗಳಾದ ನಾಗರಿಕರನ್ನು ನಿರ್ಮಾಣ ಮಾಡುವುದೆ? ಸ್ವಲ್ಪಮಟ್ಟಿಗೆ ಅದು ಸರಿ ಎನ್ನಬಹುದು. ಆದರೆ ಪದವೀಧರರಾಗುವವರ ಸಂಖ್ಯೆ ಇನ್ನು ಕಡಮೆಯಾಗುವುದು. ನಿರುದ್ಯೋಗಿ ಪದವೀಧರರ ಪ್ರಶ್ನೆಯ ಹೆಚ್ಚಿನ ಕಾಟ ತಪ್ಪುವುದು. ಹೇರಳ ಹಣವಿದ್ದವರು, ಅತ್ಯಗತ್ಯವಿದ್ದವರು ಮಾತ್ರ ಕಾಲೇಜುಗಳ ಮೆಟ್ಟಲು ಹತ್ತುವರು.

“ಇದರ ಹಿಂದೆ ರಾಜಕೀಯ ಇದೆ ಸಾರ್...ಮಹಾಬುದ್ಧಿವಂತರು ಇದನ್ನು ಸಲಹೆ ಮಾಡಿದ್ದಾರೆ...ಭೇಷ್ !”

ಹಾಗೆಂದು ಅದಕ್ಕೆ ಅವರ ವಿರೋಧವೇನೂ ಇರಲಿಲ್ಲ.

ವೆಂಕಟರಾಯರಿಗಿದ್ದ ದೃಷ್ಟಿಯೇ ಬೇರೆ. ಸುಧಾರಣೆಗಳಿಗೆ ಅಧಿಕಾರಿ ವೃತ್ತದ ಬೆಂಬಲ ದೊರೆತಿತು, ಆ ಕಾರಣದಿಂದ ಅವರೂ ಅದರ ಬೆಂಬಲಿಗರಾದರು; ಸುಧಾರಣೆಗಳ ಗುಣಗಾನ ಮಾಡಿದರು.

“ನಮ್ಮ ಸಂಸ್ಕಾನ ಮಾದರಿ ಸಂಸ್ಥಾನ ಅನ್ನೋದಕ್ಕೆ ಬೇರೆ ನಿದರ್ಶನ ಬೇಕೇನ್ರಿ? ಎಲ್ಲದ್ರಲ್ಲು ಮೇಲ್ಪಂಕ್ತಿ ಹಾಕೋರು ನಾವು.”