ಈ ಪುಟವನ್ನು ಪ್ರಕಟಿಸಲಾಗಿದೆ

“ಬೇಡೀಮ್ಮಾ.”

ಆ ತಾಯಿಗೆ ಆಶ್ಚರ್ಯವಾಗದಿರಲಿಲ್ಲ... ಬೆಂಗಳೂರಿನ ಈತ ಷೋಕಿ ಹುಡುಗನಲ್ಲ, ಕನ್ನಡಿ ಇಲ್ಲದೆಯೇ ಕ್ರಾಪು ಬಾಚಿಕೊಳ್ಳುವ ಈ ಸರಳತೆ ಎಷ್ಟೊಂದು ಒಳ್ಳೆಯ ಗುಣ !...ಅವರು ಒಂದು ಲೋಟದ ತುಂಬ ಕಾಫಿ ತಂದು ಕೊಟ್ಟರು.

ಆ ಕಾಫಿ ರುಚಿಕರವಾಗಿತ್ತು. ಆ ತಾಯಿಗೆ ಅದು ತಿಳಿದಿದ್ದರೂ ಅತಿಥಿಯ ಬಾಯಿಂದ ಪ್ರಶಂಸೆ ಅವರಿಗೆ ಬೇಕಿತ್ತು.

“ನಮ್ಮನೆ ಕಾಫಿ ಚೆನ್ನಾಗಿದೆಯೋ ಇಲ್ಲವೋ ?”

“ಹೋಟಲುಗಳ ಕೆಟ್ಟ ಕಾಫಿ ಕುಡಿದು ರುಚಿ ಕೆಡಿಸಿಕೊಂದ ನಾಲಿಗೆಗೂ ಚೆನ್ನಾಗಿ ಕಾಣ್ತದೆ ಅಂದಮೇಲೆ-"

ಅದು ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಪ್ರಶಂಸೆಯಾಗಿತ್ತು.

“ನೀವು ಹೋಟಿಲಿಗೆ ಹೋಗಬೇಡಿ. ಮನೆಮಾಡೋತನಕ ನಮ್ಮಲ್ಲೇ ಇದ್ಬಿಡಿ.”

ಆ ಆಹ್ವಾನ ಜಯದೇವನನ್ನು ಚಕಿತಗೊಳಿಸಿತು. ಆತ ಏನನ್ನೂ ಹೇಳಲಿಲ್ಲ. ತಾನು ಮನೆ ಮಾಡುವುದರ ಪ್ರಸ್ತಾಪದಿಂದ ನಗು ಬಂತು...

ಆತ ಮೌನವಾಗಿ ಲೋಟವನ್ನು ಬರಿದುಗೊಳಿಸಿದ.

ಮತ್ತೆ ತಡಮಾಡದೆ ಜಯದೇವ ಬೀದಿಗಿಳಿಯುತಿದ್ದಂತೆ ಆ ತಾಯಿ ಅ೦ದರು:

“ಹಾದಿ ಗೊತಾಗುತ್ತೆ ತಾನೆ?"

“ಓಹೋ !”

ಬೆಂಗಳೂರಿನಲ್ಲಾದರೆ ಬಂದ ಹೊಸಬರಿಗೆ ಆ ಪ್ರಶ್ನೆ ಕೇಳಬಹುದು. ಆದರೆ ಆ ಪುಟ್ಟ ಊರಲ್ಲಿ ಯಾರಿಗಾದರೂ ಹಾದಿ ತಪ್ಪುವುದೆಂದರೇನು?

ಸರಸರನೆ ನಡೆದು ಜಯದೇವ ಶಾಲೆ ಸೇರಿದಾಗ ಆಗಿನ್ನೂ ಐದು ಹೊಡೆದಿರಲಿಲ್ಲ, ದಿನದ ಸಾಠ ಮುಗಿದು ವಿದಾರ್ಥಿಗಳೆಲ್ಲ ಹೊರಟುಹೋಗಿ ಶಾಲೆ ಬರಿದಾಗಿತ್ತು. ರಂಗರಾಯರು ಆ ಬೆಳಗ್ಗೆ ಬಂದಿದ್ದ ದಿನಪತ್ರಿಕೆಯ ನೋದುತ್ತಲೂ ನಂಜುಂಡಯ್ಯ ಸಿಗರೇಟು ಸೇದುತ್ತಲೂ ಕುಳಿತಿದ್ದರು. ಜಯದೇವನನ್ನು ಮೊದಲು ನೋಡಿದ ನಂಜುಂಡಯ್ಯ “ಹಲೋ” ಎಂದರು. ಜಯದೇವ ನಸುನಕ್ಕು ವಂದನೆ ಸ್ವೀಕರಿಸಿ ಅಲ್ಲೇ ಕುರ್ಚಿಯ ಮೇಲೆ ಕುಳಿತ.