ಈ ಪುಟವನ್ನು ಪ್ರಕಟಿಸಲಾಗಿದೆ

ಹಳೆಯ ಸ್ನೇಹಿತನಂತೆ ನಂಜುಂಡಯ್ಯ ಕೇಳಿದರು:

“ಚೆನಾಗಿ ನಿದ್ದೆ ಮಾಡಿದಿರಾ ?"

ಔಪಚಾರಿಕವಾದ ಆ ಪ್ರಶ್ನೆಗೆ ಉತ್ತರ ಅನಗತ್ಯವೆಂದು ಜಯದೇವ ಮುಗುಳ್ನಕು ಸುಮ್ಮನಾದ.

ನಂಜುಂಡಯ್ಯ ಬಂಗಾರದ ಗಿಲೀಟು ಹಾಕಿದ್ದ ಕೇಸನ್ನು ಹೊರ ತೆಗೆದು ಕೇಳಿದರು.

"ಸಿಗರೇಟು?"

“ಇಲ್ಲ ಕ್ಷಮಿಸಿ. ನಾನು ಸೇದೋದಿಲ್ಲ.”

“ಆಶ್ಚರ್ಯ! ಈ ತನಕ ಸಿಗರೇಟು ಮುಟ್ಟಿಯೇ ಇಲ್ಲೊ?”

“ಹಾಗೇನೂ ಇಲ್ಲ, ಆದರೆ ಅಭ್ಯಾಸ ಮಾಡ್ಕೋಂಡಿಲ್ಲ, ಬೇಡಿ.”

ಈ ಮಾತುಕತೆ ತಮಗೆ ಸಂಬಂಧಿಸಿದ್ದೇ ಅಲ್ಲವೆಂಬಂತೆ ಕುಳಿತಿದ್ದ ರಂಗರಾಯರು ಕೊನೆಗೊಮ್ಮೆ ಪತ್ರಿಕೆ ಮಡಚಿ, ಕನ್ನಡಕವನ್ನು ತೆಗೆದು ರಕ್ಷೆಯೊಳಗಿರಿಸಿದರು. ಕರವಸ್ತ್ರದ ಅಂಚಿನಿಂದ ಕಣ್ಣುಗಳನ್ನೂ ತಲೆಯನ್ನೂ ಒರೆಸಿದರು. ಕಿಟಕಿಯಿಂದ ಹೊರನೋಡುತ್ತಾ ಅವರೆಂದರು:

“ಅಬ್ಬಾ ಎಂಥ ಸೆಖೆ! ಮಳೆ ಬರೋ ಹಾಗಿದೆ ಇವತ್ತು.”

ಹವಾಮಾನವನ್ನು ಕುರಿತಾದ ಮಾತು ಮುಂದುವರಿಸುವ ಉತ್ಸುಕತೆಯೇನನ್ನೂ ನಂಜುಂಡಯ್ಯ ತೋರಿಸಲಿಲ್ಲ. ಜಯದೇವನೂ ಸುಮ್ಮನಿದ್ದ.

ಅವರಿಬ್ಬರನ್ನೂ ನೋಡುತ್ತ, ತಲೆಗೆ ಟೋಪಿಯನ್ನೇರಿಸಿ ರಂಗರಾಯರೆಂದರು:

“ಹೋಗೋಣ್ವೆ ?"

ಸಿಗರೇಟನ್ನು ಬೂಟಿನ ಕೆಳಭಾಗಕೆ ಮುರಟಿಸಿ ಹೊರಕ್ಕೆಸೆದು ಕೊನೆಯ ಹೊಗೆಯುಗುಳಿನೊಡನೆ ನಂಜುಂಡಯ್ಯ ಹೇಳಿದರು.

"ಬನ್ನಿ, ವಾಕಿಂಗ್ ಹೋಗೋಣ. ಮಿಸ್ಟರ್ ಜಯದೇವರ ಗೌರವಾರ್ಥ ಆನಂದವಿಲಾಸದಲ್ಲಿ ಕಾಫಿ ಕೊಡಿಸ್ತೀನಿ ಬನ್ನಿ”

ಅಂತೂ ಜಯದೇವನಿನ್ನು ಅಪರಿಚಿತನಲ್ಲ. ಉಳಿದ ಇಬ್ಬರ ಸಹೋದ್ಯೋಗಿ, ಮುಂದೆ ಅವರೊಡನೆ ಕಳೆಯಬೇಕಾದ ಸಹಸ್ರ ಸಂಜೆಗಳಲ್ಲಿ ಇದೊಂದು, ಅಷ್ಟೆ. ಆ ವಾತಾವರಣಕ್ಕೆ ಹೊಂದಿ ನಡೆಯುವುದನ್ನು ಅಂದಿನಿಂದಲೇ ಅಭ್ಯಾಸ ಮಾಡಬೇಕು ಆತ.