ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಏನೆಂದು ಹೇಳಬೇಕು ತಾನು? “ಏನೂ ಇಲ್ಲ, ಅಕ್ಕಾ” “ಹುಚ್ಚ! ಏಳು.” ಸುನಂದಾ ತನ್ನ ತಂಗಿಯ ಮನೋಸ್ಥಿತಿಯನ್ನು ಚೆನ್ನಾಗಿ ತಿಳಿದಿದ್ದಳು. ಅಗಲ ಬೇಕಾದ ದಿನ ಸಮೀಪಿಸಿದಂತೆ ಅಕ್ಕನ ಇರುವಿಕೆಗಾಗಿ ಕೊರಗುತ್ತ ಹೆಚ್ಚು ಹೆಚ್ಚು ದುಃಖಿನಿಯಾಗಿದ್ದಳು ವಿಜಯಾ, ಆದರೆ ಆ ದುಃಖಕ್ಕೊಂದು ಅರ್ಥವಿತ್ತೆ? ಅದು ಅಗತ್ಯವಾಗಿತ್ತೆ? ಅಕ್ಕನ ಬಾಳನ್ನು ಮೋಡ ಕವಿಯಿತೆಂದು ತಂಗಿಯ ಮುಖವೂ ಯಾಕೆ ಬಾಡಬೇಕು? ತಂಗಿ ಹಸನ್ಮುಖಿಯಾಗಿಯೇ ಹಗುರವಾದ ಹೃದಯದಿಂದಲೇ ಗಂಡನ ಮನೆಗೆ ಹೋಗಬೇಕಾದುದು ನ್ಯಾಯ... "95...." ಕರೆದ ಕಂಠ ಗದ್ಗದಿತವಾಗಿತ್ತೆಂದು ಸುನಂದೆಯ ಕತ್ತು ಬಾಗಿತು, ನೀಳವಾದ ಎಳೆಯ ತೋಳು ಆ ಕತ್ತನ್ನು ಆವರಿಸಿತು. “ಅಕ್ಕಾ.. ನನಗೆ ಸಂಕಟವಾಗುತ್ತೆ. ತಂಗಿಯ ಒತ್ತಾಯಪೂರ್ವಕವಾಗಿ ತುಟಿಗಳ ಮೇಲೆ ನಗೆ ಕುಣಿಸುತ್ತ ಸುನಂದಾ ಅಂದಳು: “ಇನ್ನು ಸ್ವಲ್ಪ ಹೊತ್ತು ಕಣೇ. ನಿನ್ನ ಸಂಕಟ ಪರಿಹಾರಕ್ಕೆ ವೆಂಕಟರಮಣ ಬಂದ್ದಿಡ್ತಾನೆ.” ಆದರೆ ತಂಗಿಯ ಕಣ್ಣಂಚಿನಲ್ಲಿ ಕಂಬನಿ ತುಳುಕಿತು. ತೋಳು ಅಸಹನೆಯಿಂದ ಅಕ್ಕನ ಕೊರಳು ಬಿಗಿಯಿತು. “ಎಂಥ ಮಾತಾಡ್ತಿ ಅಕ್ಕ?” ಎಷ್ಟೊಂದು ಪ್ರಯಾಸದಿಂದ ಮನಸ್ಸಿನ ಸುತ್ತಲೂ ಪ್ರಾಕಾರಗಳನ್ನು ಕಟ್ಟಿದ್ದಳು ಸುನಂದಾ! ಅಷ್ಟು ಮಾಡಿಯೂ ಆ ಯತ್ನ ವ್ಯರ್ಥವಾಯಿತು. ಸೋದರಿಯ ಒಲವಿಗೆ ಒಲವೇ ಉತ್ತರ, ಕಂಬನಿಗೆ ಪ್ರತ್ಯುತ್ತರ ಕಂಬನಿ. ಎರಡು ಜೀವಗಳ ಎರಡು ಭಾವಗಳ ಜೋಡಣೆಯನ್ನು ಸಾಧಿಸಿತು ಕ್ಷಣಕಾಲದ ಮೌನ. ಆ ಕ್ಷಣವೂ ಯುಗವೆಂದು ತೋರಿದ ಬಳಿಕ ಮಾತು, “ಹ್ಯಾಗಕ್ಕೆ ನಿನ್ನನ್ನು ಬಿಟ್ಟು ಹೋಗ್ಲಿ?” “ನನಗೇನಾಗಿದೇಂತ ಹೀಗಾಡ್ತೀಯ ವಿಜಯಾ?” ಹಿಡಿತದಿಂದ ಅಕ್ಕನನ್ನು ಬಿಟ್ಟು ಕೊಟ್ಟು, ನಿಟ್ಟುಸಿರು ಬಿಟ್ಟು, ವಿಜಯಾ ಎದ್ದು ಕುಳಿತಳು. ಚೆದರಿದ್ದ ತಲೆಗೂದಲನ್ನು ಎರಡೂ ಅಂಗೈಗಳಿಂದ ಹಿಂದಕ್ಕೆ ತಳ್ಳಿದಳು. ಮನಸ್ಸು ರೋಸಿ ನುಡಿಯಿತು... ತಾನು ಅಕ್ಕನನ್ನು ಬಿಟ್ಟು ಹೋಗಲೇಬೇಕು ಹಾಗಾ ದರೆ ಹೋಗದೆ ಬೇರೆ ವಿಧಿಯೇ ಇಲ್ಲ. “ವಾರಕ್ಕೊಂದ್ಬಲ ಕಾಗದಾ ಬರೀತಾ ಇದ್ದೀಯಾ ಅಕ್ಕ?-ತಪ್ಪದೆ?”