ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ

೫೫

ವಿಷಯದಲ್ಲಿ ರಾಮರಾಯರು ನಿಷ್ಪಕ್ಷಪಾತಿಗಳೆಂದೇ ಹೇಳಬಹುದು. ಅವರ ಮೊದಲ ಲಗ್ನದ ವೇಳೆಗೆ ಒಂದು ಪ್ರಸಂಗ ನಡೆಯಿತಂತೆ. ಮಾತುಕತೆಯಾಡುವಾಗ ವರದಕ್ಷಿಣೆಯ ರಕಂ ೫೦೦ ಎಂದು ನಿಶ್ಚಯವಾಗಿತ್ತಂತೆ. ಆದರೆ ಸರಿಯಾಗಿ ಲಗ್ನದ ವೇಳೆಗೇನೇ ಆ ಬಡಪಾಯಿ ತಂದೆಗೆ ೫೦೦ ರೂ. ಕೂಡಿಸಿ ಕೊಡುವದಕ್ಕಾಗಲಿಲ್ಲವಂತೆ. ಅಲ್ಲಿ ಇಲ್ಲಿ ಕಾಡಿ ಬೇಡಿದರೂ, ರಕಂ ೪೦೦ ನ್ನು ದಾಟಲಿಲ್ಲ ಲಗ್ನವೇ ಮುರಿಯುವ ಪ್ರಸಂಗ ಬಂದಿತ್ತು. ಆದರೆ ರಾಮರಾಯರು ಬಡ್ಡಿ ದರ ಹಾಕಿ ಮಾವನ ಕಡೆಯಿಂದ ಪ್ರಾಮೇಶ್ವರೀ ನೋಟನ್ನು ಬರೆಸಿಕೊಂಡು ಲಗ್ನ ಮುರಿಯದ ಹಾಗೆ ನೋಡಿಕೊಂಡರು. ಮೊದಲೇ ಹಿಂಡಿ ಹಿಪ್ಪಿಯಾದ ಮಾವನಿಗೆ ಈ ಸಾಲ ತಿರುಗಿಸಲಿಕ್ಕಾಗಲಿಲ್ಲ. ಬಡ್ಡಿ ಅಸಲು ಕೂಡಿ ೮೦೦ ಆದಾಕ್ಷಣ, ರಾಮರಾಯರು ಮಾವನ ಮನೆಯನ್ನೆ ಗಿಟ್ಟಿಸಿ ಬಿಟ್ಟರು. ಮನೆ ಜಪ್ತಿಯಾದ ಸುದ್ದಿ ಕೇಳಿ ಅವರ ಮಾವ ಮರುಗಿಗೋಳಾಡಿ ಹಳ್ಳಿ ಸೇರಿದ.

ಆದರೂ ರಾಮರಾಯರ ನಿಷ್ಪಕ್ಷಪಾತ ಹೃದಯ ಅಳುಕಲಿಲ್ಲ. ಮಾವ ಹೊಟ್ಟೆಬಟ್ಟೆಗಾಗಿ ತಿರುಗಾಡಿ ತೊಳಲಾಡುತ್ತಿದ್ದುದನ್ನು ಊರಜನರೇ ನೋಡುತ್ತಿದ್ದರು. ರಾಮರಾಯರ ಉಳಿದ ಸಾಲಗಾರರು ಈ ದೃಶ್ಯ ನೋಡಿ ಅರೆಜೀವಿಗಳಾಗಿ ಬಿಟ್ಟಿದ್ದರು.



ಸೋಮ ರಾಯರ ಮನೆ ಬಿಟ್ಟು ಹೊರಬಂದನೇನೋ ನಿಜ, ಆದರೆ ಹೋಗುವದೆಲ್ಲಿ ತಿಳಿಯಲಿಲ್ಲ. ಅವನ ಮನಸ್ಸೇ ಸ್ಥಿರದಲ್ಲಿರಲಿಲ್ಲ. ಕಾಲು ಎಳೆದತ್ತ ಹೊರಟಿದ್ದ. ಮನಸ್ಸಿನಲ್ಲಿ ನೂರಾಎಂಟು ಯೋಚನೆಗಳು. ಒಳಗೆ ಮನಸ್ಸಿನ ದ್ವಂದ್ವ ನಡೆದೇ ಇತ್ತು. ಒಂದು ಮನಸ್ಸು ಹೇಳುತ್ತಿತ್ತು "ಸೇಡು. ಪ್ರಾಮಾಣಿಕತನದಿಂದ ದುಡಿದುದರ ಫಲವಿದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಲೇಸು. ಇಂದು ರಾತ್ರಿಯೇ ರಾಯರನ್ನು ಮುಗಿಸು." ಇನ್ನೊಂದು ಮನಸ್ಸು ಅವಿರೋಧವಾಗಿ ಹೇಳುತ್ತಿತ್ತು.