ಈ ಪುಟವನ್ನು ಪರಿಶೀಲಿಸಲಾಗಿದೆ

ಹಮಾಲ ಇಮಾಮ್‍ಸಾಬಿ


ಮೊದಲ ಮಳೆ ಕಳೆದ ಬಳಿಕ, ಸೂರ್ಯ ಧೈರ್ಯಗೊಂಡು ಮತ್ತೊಮ್ಮೆ ಚಕ್ರ ಕುಣಿತ ಆರಂಭಿಸಿದ್ದ.

ನೀಲಿ ವರ್ಣದ ವೇದಿಕೆಯ ಮೇಲೆ ಹಗಲು, ಕರಿ ಪರದೆಯ ಹಿಂದೆ ರಾತ್ರೆ, ಕತ್ತಲು ಆವರಿಸಿದಾಗ ಚಂದ್ರನೊಂದು ಕಂದೀಲು, ನೀರು ಕುಡಿದು ನೆಲ ತೃಪ್ತವಾಗಿತ್ತು. ಗಿಡಮರಗಳೆಲ್ಲ, ಹಸಿರುಮಯ. ಮನುಷ್ಯ ತುಳಿವ ದಾರಿಗೆರೆಯ ಎರಡು ಪಕ್ಕಗಳಲ್ಲೂ ಗರಿಕೆಹುಲ್ಲು ಟಿಸಿಲೊಡೆದು ಮುಸಿಮುಸಿ ನಗುತ್ತಿತ್ತು.

ಬಹಳ ಹೊತ್ತು ನೆಲೆಸಿದ ನೀರವತೆಯನ್ನು ಭೇದಿಸಿ ಒಂದು ಸದ್ದು ಬಂತು.
ಫೋನ್ ಯಂತ್ರದ ಖಣಖಣತ್ಕಾರ. ಅದನ್ನು ಹಿಂಬಾಲಿಸಿ:
“ಹಲ್ಲೋ....ಹಲ್ಲೋ...."
ಇನ್ನೊಂದು ನಿಲ್ದಾಣದ ವೃತ್ತಿ ಬಂಧುವಿನೊಡನೆ ಈ ಮಾಸ್ತರರ ಸಂವಾದ.
ಹೆಬ್ಬಾಗಿಲ ಹೊರಗೆ ಸಿಮೆಂಟಿನ ಒರಗು ಬೆಂಚಿನ ಮೇಲೆ, ಹೂಬಿಸಿಲಲ್ಲಿ ಮೈ ಕಾಯಿಸುತ್ತ ಇಮಾಮಸಾಬಿ ಕುಳಿತಿದ್ದ.
“ಅರೇ, ಗಾಡಿ ಔಟಾಯಿತೇನು ಹಾಗಾದರೆ?”
ನಿರ್ಜನವಾಗಿದ್ದ ನಿಲ್ದಾಣ. ಔಟಾಗುವುದೆಂದರೇನು? ಲೋಕಲನ್ನು ಕಳುಹಿಬಂದು ಅರ್ಧ ಘಂಟೆ ಕೂಡ ಆಗಲಿಲ್ಲವಲ್ಲ ಇನ್ನೂ?
ಮಾಲ್‌ಗಾಡಿಯೇ ಇರಬೇಕು. ಮುಂದಿನ ನಿಲ್ದಾಣದಲ್ಲೋ ಅದರಾಚೆಗೋ ಕ್ರಾಸಿಂಗ್. ಇಳಿಸುವ ಸಾಮಾನು ಇದ್ದರಷ್ಟೆ ಅದಿಲ್ಲಿ ನಿಲ್ಲಬಹುದು.ಇಲ್ಲವೆಂದಾದರೆ, ಸಿಗ್ನಲಿನ ಗೌರವರಕ್ಷೆ ಸ್ವೀಕರಿಸಿ, ಹಸುರು ನಿಶಾನೆಯಿಂದ ಗಾಳಿ ಹಾಕಿಸಿಕೊಂಡು, ಮುಂದಕ್ಕೆ ಪಯಣ.
ಮಾಲ್‌ಗಾಡಿಯೊಂದೇ ಅಲ್ಲ. ಮೇಲ್ ಎಕ್ಸ್ ಪ್ರೆಸ್ ಗಾಡಿಗಳೂ ಹಿಂದೆ