ಈ ಪುಟವನ್ನು ಪರಿಶೀಲಿಸಲಾಗಿದೆ

ಹಮಾಲ ಇಮಾಮ್‌‌ಸಾಬಿ
65

ಅಲ್ಲಿ ನಿಲ್ಲುತ್ತಿರಲಿಲ್ಲ. ಒಮ್ಮೆಯಷ್ಟೇ ವಿಶೇಷ ಸಂದರ್ಶಕರು ಬಂದರೆಂದು ಮೇಲ್‌ಗಾಡಿ ನಿಂತುದು, ಆಗಿನ ತಳಿರು ತೋರಣಗಳ ಸಂಭ್ರಮ, ಇಮಾಮ್‍ಸಾಬಿಗೆ ನೆನಪಿತ್ತು. ಬಂದಿಳಿದುದು ಒಬ್ಬ ಆಂಗ್ಲ ಉಚ್ಛಾಧಿಕಾರಿ. ಅರಸರಲ್ಲ, ವೈಸರಾಯರೋ ರೆಸಿಡೆಂಟರೋ-ಯಾರೋ ಒಬ್ಬರು. ಇಮಾಮ್ ಆಗಿನ್ನೂ ಮೂವತ್ತು ವರ್ಷಗಳ ಜವ್ವನಿಗ.

ಆಗ ಅವನ ವಯಸ್ಸು ಖಚಿತವಾಗಿ ಅಷ್ಟೇ ಎಂದು ಹೇಳಲು ಯಾವ ಆಧಾರವಿತ್ತು? ಬೀಬಿ ಮನೆಗೆ ಬಂದ ವರ್ಷ ಅದು, ಎರಡನೆಯ ಬೀಬಿ. ಚೊಚ್ಚಿಲ ಹೆರಿಗೆಗೆಂದು ತವರುಮನೆಗೆ ಹೋದ ಮೊದಲಿನಾಕೆ ಮರಳಿರಲಿಲ್ಲ. ಪ್ರಸವದ ವೇಳೆ, ಬಸಿರಲ್ಲಿದ್ದ ಜೀವದೊಡನೆ ಆಕೆಯೂ ಅಪಮೃತ್ಯುವಿಗೆ ಗುರಿಯಾಗಿದ್ದಳು. ಅದು, ಇಮಾಮ್‍ಸಾಬಿಯ ಚಿತ್ತಫಲಕದ ಮೇಲೆ ಅಳಿಸಲಾಗದ ಚಿತ್ತನ್ನು ಉಳಿಸಿ ಹೋದ ಘಟನೆ. ಆ ಯಾತನೆಯನ್ನು ಮೂಲೆಗೊತ್ತಿ ಇನ್ನೊಬ್ಬಳ ಕೈ ಹಿಡಿಯಲು, ಆರೆಂಟು ವರ್ಷಗಳ ಅವಧಿಯೇ ಅವನಿಗೆ ಬೇಕಾಯಿತು. ಆಗ ಆತನ ಸೋದರ ಮಾವ ಅಂದಿದ್ದ:

“ಮೂವತ್ತು ವರ್ಷವಾಯ್ತು ನಿನಗೆ. ಇನ್ನು ತಡಮಾಡ್ಬೇಡ."

ಅನಂತರವೂ ದಿನ ತಿಂಗಳು ವರ್ಷಗಳ ಲೆಕ್ಕವಿಡುವ ಗೊಡವೆಗೆ ಇಮಾಮ್‌ಸಾಬಿ ಹೋದವನಲ್ಲ. ಗಳಿಸಿದ ದುಡ್ಡನ್ನಷ್ಟು ಹೆಂಡತಿಗೆ ದಿನವೂ ಒಪ್ಪಿಸಿದರಾಯ್ತು ಅವನ ಕೆಲಸ. ಬೀಬಿ ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ. ಅವಳು ಹೆತ್ತುದು ಒಟ್ಟು ಐದು ಮಕ್ಕಳನ್ನು. (ಒಂದರ ಅನಂತರ ಒಂದಾಗಿ, ಐದೂ ಗಂಡೇ.) ತಮ್ಮ ವಿವಾಹವಾಗಿ ಎಷ್ಟು ಕಾಲವಾಯಿತು? ಮಕ್ಕಳ ವಯಸ್ಸೆಷ್ಟು-ಎಂಬುದನ್ನೆಲ್ಲ ಕೂಡಿಸಿ ಕಳೆದು ಹೇಳುತ್ತಲಿದ್ದವಳು ಇಮಾಮ್‍ಸಾಬಿಯ ಹೆಂಡತಿಯೇ.

ಇದೇ ಮೊನ್ನೆ ಆಕೆ ಅಂದಿದ್ದಳು:

"ಈ ಬಕ್ರೀದ್‌ಗೆ ನಮ್ಮ ಲಗ್ನ ಆಗಿ ಮುವತ್ತು ವರ್ಸ ಆಯ್ತೂಂದ್ರೆ...?

ಅವನಿಗೆ ಅಚ್ಚರಿಯಾಗಿತ್ತು.

"ಹಾಂ? ಹೌದಾ?... ಹಾಗಾದರೆ ನನಗೆಷ್ಟು ವರ್ಷ ಈಗ?"

“ನನ್ನ ಕೇಳ್ತೀರಲ್ಲ? ಅರವತ್ತು ಆಗ್ಲಿಲ್ವೇನು?”

“ಹೌದಾ? ಸರಿ! ಮುದುಕ ಅದೆ ಅನ್ನು!”

“ನೀವು ಮುದುಕ, ನಾನು ಮುದುಕಿ."

ಜೀವನದುದ್ದಕ್ಕೂ ಬಡತನದ ಬುತ್ತಿಯೇ ಆದರೂ, ನೇಗಿಲಗೆರೆಗಳಿಲ್ಲದ