...ಒರಗಿ ಕುಳಿತಲ್ಲೇ. ಸೊಸೆಯನ್ನು ಕುರಿತು ಯೋಚಿಸುತ್ತಿದ್ದಂತೆಯೇ, ಇಮಾಮ್‌ಸಾಬಿಗೆ ಜೊಂಪು ಹತ್ತಿತು. ಆದರೆ, ಹತ್ತಿಪ್ಪತ್ತು ನಿಮಿಷಗಳಲ್ಲೆ ಮಾಸ್ತರರ ಆಳಗಂಟಲ “ಹಲ್ಲೋ_ಹಲ್ಲೋ-” ಅವನನ್ನು ಎಚ್ಚರಿಸಿತು.
ನೆರಳು ಸರಿದು, ಕೊಂಬೆಗಳೆಡೆಯಿಂದ ಬಿಸಿಲು ಅವನ ಅಂಗಾಂಗಗಳ ಮೇಲೆ ಬಿದ್ದಿತ್ತು.
ಗಾಡಿ ತಡವೆಂದು ತಿಳಿಯದೆ ಜನ ಬರತೊಡಗಿದ್ದರು. ಜಟಕಾ ಬಂಡಿಗಳು ಬಂದುವು. ಅರಳೆ ಹಿಂಜುವ ಗಿರಣಿಯೊಡೆಯರ ಕಾರೂ ಬಂತು. ಆದರೆ ಇಮಾಮ್‌ಸಾಬಿಯನ್ನು ಮೌಢ್ಯ ಆವರಿಸಿಬಿಟ್ಟಿತ್ತು. ಪಾದಗಳು ಚಲಿಸುತ್ತಿರಲಿಲ್ಲ. ಪ್ರಯಾಣಿಕರತ್ತ ಅವನ ಗಮನವಿರಲಿಲ್ಲ.
ಒಮ್ಮೆ ಅಬ್ದುಲ್ಲನೆಂದ:
“ನಿಂತೇ ಬಿಟ್ಟೆಯಲ್ಲ, ದಾದಾಮಿಯಾ?”
ಇಮಾಮ್‌ಸಾಬಿ ಉತ್ತರವೀಯಲಿಲ್ಲ. ಮುಗುಳು ನಗಲು ಯತ್ನಿಸಿದ, ಯತ್ನಿಸಿ ವಿಫಲನಾದ.
ಮನೆಗೆ ಹೊರಟುಬಿಡಬೇಕೆನಿಸಿತು. ರೈಲಿನ ಅವಘಡದ ರಾತ್ರಿ ಅಲ್ಲಿ ಕೇಳಿದಂತಹ ಆರ್ತನಾದವೇ ಈಗಲೂ? ಹೋಗಿ ತಾನು ಮಾಡುವುದಾದರೂ ಏನು?
ಸಂಜೆಯ ಪ್ಯಾಸೆಂಜರ್ ನೋಡಿಕೊಂಡೇ ಹೊರಡುವೆ ಎಂದು, ಇಮಾಮ್‌ಸಾಬಿ ಗಟ್ಟಿ ಮನಸ್ಸು ಮಾಡಿದ.
ಮೇಲ್‌ಗಾಡಿ ಬಂದು, ಮುಂದಕ್ಕೆ ಸಾಗಿತು.
ಸದಾ ಚಲಿಸುತ್ತಿರುವ ಜನರು. ಹೆಂಗಸರು, ಗಂಡಸರು, ಮಕ್ಕಳು. ತನ್ನಷ್ಟೇ ವಯಸ್ಸಾದವರು ಕೂಡ. ತಾನು ಮಾತ್ರ ಒಮ್ಮೆಯೂ ರೈಲಿನಲ್ಲಿ ಪ್ರಯಾಣ ಮಾಡಿರಲಿಲ್ಲ. ಜೀವಮಾನವನ್ನೆಲ್ಲ ರೈಲುಮನೆಯಲ್ಲೇ ಸವೆದಿದ್ದರೂ ಗಾಡಿಯಲ್ಲಿ ಮಾತ್ರ ಒಮ್ಮೆಯೂ ಎಲ್ಲಿಗೂ ಹೋಗಿರಲಿಲ್ಲ, (ವಿಸ್ಮಯಗೊಳಿಸುವಂತಹ ತಥ್ಯ.) ಆದರೆ ತನ್ನ ಮಕ್ಕಳು-ಮೊದಲಿನ ಮೂವರು-ರೈಲು ಗಾಡಿಯಲ್ಲಿ ಕುಳಿತೇ ದೂರದ ಊರುಗಳಿಗೆ ಹೋಗಿಬಿಟ್ಟಿದ್ದರು, ತನ್ನ ಕಣ್ಣು ತಪ್ಪಿಸಿ. ಈಗ ಇದ್ದಕ್ಕಿದ್ದಂತೆ ಅವರು ಬಂದರೆ-ಹಿರಿಯವನನ್ನು ಪರಿಚಯದವರೊಬ್ಬರು ಮುಂಬಯಿಯಲ್ಲಿ ಕಂಡಿದ್ದರಂತೆ. (ತಂದೆಯಂತೆ ಹಮಾಲನೇ!) ನಾಲ್ವರು ಮಕ್ಕಳಂತೆ. ಕೆಲವು ವರ್ಷಗಳೇ ಆಗಿದ್ದುವು ಆ ಮಾತಿಗೆ. ಇಮಾಮ್ ಸಾಬಿಯ ಆಯುಷ್ಯದಲ್ಲಿ ಅಂಚೆಯ ಮೂಲಕ ಒಂದೇ ಒಂದು ಕಾಗದ ಆತನಿಗೆ ಬಂದಿತ್ತು ಮೂರನೆಯ ಮಗನಿಂದ. ಅಣ್ಣನೊಡನೆ ಪಾಕಿಸ್ತಾನಕ್ಕೆ ಹೋಗುವು