ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್‌ಸಾಬಿ
77

ದಾಗಿ ಬರೆದಿದ್ದ. ಅದೊಂದು ಹೊಸ ದೇಶ-ಪಾಕಿಸ್ತಾನ. ಚಾಕು ಕಲ್ಲು ಈಟಿಗಳ ಆ ಕತೆಯನ್ನು ಇಮಾಮ್‌ಸಾಬಿ ಕೇಳಿ ತಿಳಿದಿದ್ದ, ಸ್ವಲ್ಪ ಸ್ವಲ್ಪ....ಇನ್ನು ನಾಲ್ಕನೆಯವನು. ಆ ಸರ್ಕಸ್ ತಾನು ಬದುಕಿರುವಾಗಲೇ ಒಮ್ಮೆ ಮತ್ತೆ ಈ ಊರಿಗೆ ಬಂದಿದ್ದರೆ....ಇಮಾಮ್ ಸಾಬಿಯ ಮಗ ಡೊಂಬರಾಟಕ್ಕೂ ಇಳಿದ. ಆಹಾ!...

ವೃದ್ಧ ನೀಳವಾಗಿ ಉಸಿರುಬಿಟ್ಟು, ಗೊತ್ತು ಗುರಿ ಇಲ್ಲದೆ ಅತ್ತಿತ್ತ ನಡೆದಾಡಿದ. ಸಿಗ್ನಲ್ ಕಂಬದ ಈಚೆಗಿದ್ದ ನೀರಿನ ಟ್ಯಾಂಕಿನ ಬಳಿ ಸಾರಿ, ಅಲ್ಲೇ ಕೆಳಗೆ ದಿನ್ನೆಯ ಮೇಲೆ ಕುಳಿತ. ಸೂರ್ಯನ ತಾಪ ಕಡಿಮೆಯಾಗತೊಡಗಿತ್ತು. ಅಲ್ಲಿಂದ ಅವನಿಗೆ, ನೀಳವಾಗಿ ಮಲಗಿ ಹಸುರು ರಾಶಿಯೊಳಗೆಲ್ಲೊ ಮಾಯವಾಗಿದ್ದ ರೈಲು ಕಂಬಿಗಳು ಕಾಣಿಸುತ್ತಿದ್ದುವು.

ಮನೆಯ ನೆನಪು ಮತ್ತೆ ಮತ್ತೆ ಮುದುಕನನ್ನು ಬಾಧಿಸಿತು. “ದೇವರೆ! ಎಲ್ಲಾ ಸುಸೂತ್ರವಾಗಿ ನಡೆಸ್ಕೊಡು” ಎಂದ ಆತ. ತುಸು ಧ್ವನಿ ತೆಗೆದೇ ಅನನ್ಯ ಭಕ್ತಿಯಿಂದ ಬಿಕ್ಕುತ್ತ ಪ್ರಾರ್ಥಿಸಿದ.

....ಲೋಕಲ್ ಬಂದು ಹೋಯಿತು.
....ಇನ್ನು ಉತ್ತರದಿಂದ ಬರುವ ಪ್ಯಾಸೆಂಜರ್.
....ಆಕಳು, ಮೇಕೆ, ಕುರಿಗಳು ಹಿಂಡು ಹಿಂಡಾಗಿ ಹಾದುಹೋದವು.

ಗೃಹಾಭಿಮುಖವಾಗಿ.

ಇಮಾಮ್‌ಸಾಬಿ, ಸಿಗ್ನಲ್‌ಕಂಬಿಯ ರುಂಯ್ ಸಪ್ಪಳ ಕೇಳಿಸಿದಂತಾಗಿ ಎದ್ದ. ಪ್ರಯತ್ನ ಪೂರ್ವಕವಾಗಿ ಚುರುಕಾಗಿ ನಡೆಯುತ್ತ ನಿಲ್ದಾಣದತ್ತ ಬಂದ.

ಹೊರಗೆ, ಬೆಳಗ್ಗೆ ಕುಳಿತಿದ್ದಲ್ಲೇ ಒರಗುಬೆಂಚಿನ ಮೇಲೆ ಆಸೀನನಾದ.

ಒಂದು ಜಟಕಾ ಅವನ ಹತ್ತಿರದಿಂದಲೇ ಬಂತು. ಅದನ್ನು ಕಂಡೂ ಕಾಣದವನಂತಿದ್ದ ಇಮಾಮ್‌ಸಾಬಿ. ಕೆಳಕ್ಕೆ ಇಳಿದವನು ಸಿಗರೇಟು ಸೇದುತ್ತಲಿದ್ದ ಯುವಕನೊಬ್ಬ. ತಾನು ಏಳದೆ ಕುಳಿತೇ ಇದ್ದುದನ್ನು ಕಂಡು ಆತ ಅಚ್ಚರಿಗೊಂಡಂತೆ ಇಮಾಮ್‌ಸಾಬಿಗೆ ಭಾಸವಾಯಿತು. ಜಟಕಾದವನು ಕರೆದ:

“ಆವೋ ದಾದಾಮಿಯಾ.”
ಜ್ಞಾ-ಹೋಗಬೇಕು ತಾನು.
ಒಂದು ಸೂಟ್‌ಕೇಸು: ಒಂದು ಕಿಟ್.
“ಇಂಟರ್, ಸಾಬ್?”
ಯುವಕ ಅಬ್ಬರಿಸಿದ:
"ಸೆಕೆಂಡ್ ಕ್ಲಾಸ್! ಇಂಟರಂತೆ_!"