ಈ ಪುಟವನ್ನು ಪ್ರಕಟಿಸಲಾಗಿದೆ
೯೬
ಕನ್ನಡಿಗರ ಕರ್ಮಕಥೆ

ಅಹಮ್ಮದನಗರದ ಹುಸೇನ ನಿಜಾಮಶಹನಿಗೂ ದ್ವೇಷವುಂಟಾಯಿತು. ತನ್ನೊಬ್ಬನಿಂದ ನಿಜಾಮಶಹನ ಪಾರಪತ್ಯ ಮಾಡುವದಾಗದೆಂದು ತಿಳಿದು, ಅಲಿ ಆದಿಲಶಹನು ರಾಮರಾಜನ ಸಹಾಯವನ್ನು ಕೇಳಿಕೊಂಡನು. ಅದಕ್ಕೆ ರಾಮರಾಜನು ಸಂತೋಷದಿಂದ ಒಡಂಬಟ್ಟು ಅಲಿಗೆ ಸಹಾಯ ಮಾಡಿದನು. ಈ ಯುದ್ಧವು ೧೫೫೮ ಆಯಿತು. ಈ ಪ್ರಸಂಗದಲ್ಲಿ ಅಲೀ ಆದಿಲಶಹನೂ, ರಾಮರಾಜನೂ ಕೂಡಿ ಅಹಮ್ಮದನಗರ ರಾಜ್ಯದಲ್ಲಿ ಅನರ್ಥವನ್ನು ಎಸಗಿದರು. ಪರಿಂಡೆಯಿಂದ ಜುನ್ನರದವರೆಗೆ ಮತ್ತು ಅಹಮ್ಮದನಗರದಿಂದ ದೌಲತಾಬಾವದವರೆಗೆ ಒಂದು ಹಳ್ಳಿಯಲ್ಲಿ ಕೂಡ ಜನವಸತಿಯು ಉಳಿಯದಂತೆ ರಾಜ್ಯವನ್ನು ಬೇಚಿರಾಖು ಮಾಡಿದರು. ಮುಂದೆ ಬರಬರುತ್ತ ಅಲೀ ಆದಿಲಶಹನಿಗೂ ರಾಮರಾಜನಿಂದ ತ್ರಾಸವಾಗಹತ್ತಿತು. ರಾಮರಾಜನು ಎಲ್ಲ ಮುಸಲ್ಮಾನ ಬಾದಶಹರಿಗೂ ತಲೆಭಾರವಾದನು. ಆತನ ಉತ್ಕರ್ಷವನ್ನು ಆ ಬಾದಶಹರು ಸೈರಿಸದಾದರು. ಒಂದು ಸಾರೆ ಸಹಾಯ ಮಾಡಿದ್ದಕ್ಕಾಗಿಯೇ ಆದಿಲಶಹನು ರಾಮರಾಜನಿಗೆ ಗೋವಳಕೊಂಡ, ಷಾನಗಲ್ಲ, ಗಂಟೂರ ಕೋಟೆಗಳನ್ನು ಕೊಡಬೇಕಾಯಿತು. ತಮ್ಮತಮ್ಮೊಳಗೆ ಜಗಳಾಡುತ್ತಿದರಿಂದ ಈ ಹಿಂದು ರಾಜನು ಇಷ್ಟು ಬಲಿಷ್ಠನಾದನು; ನಾವೇ ಒಕ್ಕಟ್ಟಿನಿಂದ ಇದ್ದರೆ ಈತನ ನಾಶಮಾಡಲಿಕ್ಕೆ ಅವಕಾಶವು ಬೇಡವೆಂದು ಎಲ್ಲ ಮುಸಲ್ಮಾನ ಬಾದಶಹರು ಭಾವಿಸಿ, ತಮ್ಮೊಳಗೆ ಒಕ್ಕಟ್ಟು ಮಾಡಿಕೊಳ್ಳಲಿಚ್ಛಿಸಿದರು. ತಾವು ಒಕ್ಕಟ್ಟು ಬೆಳೆಸಿಕೊಳ್ಳದಿದ್ದರೆ ತಮ್ಮ ರಾಜ್ಯಗಳು ರಸಾತಳಕ್ಕೆ ಇಳಿಯುವದೇ ನಿಶ್ಚಯವೆಂದು ಅವರು ತಿಳಿದರು. ಅವರಲ್ಲಿ ವಿಶೇಷವಾಗಿ ಅಲೀ ಆದಿಲಶಹನ ಮನಸ್ಸಿಗೆ ರಾಮರಾಜನ ಉತ್ಕರ್ಷದ ಚಿಂತೆಯು ಬಹಳವಾಗಿ ಹತ್ತಿ, ಆತನು ತಮ್ಮೊಳಗೆ ಒಕ್ಕಟ್ಟು ಬೆಳೆಸುವ ಕೆಲಸದಲ್ಲಿ ಮುಂದುವರಿದು ಪ್ರಯತ್ನ ಮಾಡಹತ್ತಿದನು. ಎರಡು ಸಾರೆ ಆತನು ರಾಮರಾಜನ ಸಹಾಯವನ್ನು ಪಡೆದವನಾದ್ದರಿಂದ, ರಾಮರಾಜನ ಸಾಮರ್ಥ್ಯವೂ, ಆತನ ಸೊಕ್ಕೂ ಅಲೀ ಆದಿಲಶಹನಿಗೆ ಗೊತ್ತಾಗಿದ್ದವು. ಅಲಿ ಆದಿಲಶಹನು ತನ್ನ ವಿಶ್ವಾಸದ ಸರದಾರನಾದ ಕಿಷ್ಬರಖಾನನೊಡನೆ ಆಲೋಚಿಸಿ, ಎರಡು ಬಗೆಯ ತಂತ್ರಗಳನ್ನು ಹೂಡಿದನು. ಆ ತಂತ್ರಗಳಲ್ಲಿ ಒಂದನೆಯದು, ಉಳಿದ ಮೂವರು ಬಾದಶಹರ ಕಡೆಗೆ ವಕೀಲರನ್ನು ಕಳಿಸಿ ನಾವೆಲ್ಲರೂ ಕೂಡಿ ರಾಮರಾಜನನ್ನು ನಾಶಗೊಳಿಸಬೇಕೆಂದು ಆಲೋಚಿಸುವದು. ರಾಮರಾಜನ ಕಡೆಯ ವಕೀಲನನ್ನು ಕಳಿಸಿ, ನಾನೂ ನೀನೂ ಕೂಡಿ ಉಳಿದ ಮೂವರು ಮುಸಲ್ಮಾನ ಬಾದಶಹರನ್ನು ನಾಶಗೊಳಿಸಿ ರಾಜ್ಯವನ್ನು