ಈ ಪುಟವನ್ನು ಪ್ರಕಟಿಸಲಾಗಿದೆ
ರಾಮರಾಜನ ಉತ್ಕರ್ಷ
೯೫

ವರ್ಷಗಳಲ್ಲಿ ಆತನು ಕೆಲವು ವರ್ಷಗಳನ್ನು ಅಜ್ಞಾತವಾಸದಲ್ಲಿಯೂ, ಕೆಲವು ವರ್ಷಗಳನ್ನು ಕುಟಿಲತಂತ್ರ ರಚನೆಯಲ್ಲಿಯೂ ಕಳೆದನು. ಅಚ್ಯುತರಾಯನು ಮರಣ ಹೊಂದಿ ನಂತರ ಆತನ ಅಣ್ಣನ ಮಗನಾದ ಸದಾಶಿವರಾಯನನ್ನು ರಾಮರಾಜನು ಪಟ್ಟಕ್ಕೆ ಕುಳ್ಳಿರಿಸಿದನು. ಈ ಕೆಲಸದಲ್ಲಿ ರಾಮರಾಜನ ಬಂಧುಗಳಾದ ತಿರುಮಲನೂ, ವೆಂಕಟಾದ್ರಿಯೂ ಒಳಿತಾಗಿ ಸಹಾಯ ಮಾಡಿದರು. ಸದಾಶಿವರಾಯನು ಸಾಯುವವರೆಗೆ ಈ ಮೂವರ ಕೈಯೊಳಗೆ ಸೆರೆಯಾಳಿನಂತೆ ಜೀವಿಸಿದನು. ಈ ಕಾಲದಲ್ಲಿ ರಾಮರಾಜನೇ ವಿಜಯನಗರದ ನಿಜವಾದ ರಾಜನಾಗಿದ್ದನು; ಆದರೆ ಆತನು ತನ್ನನ್ನು “ಮಹಾರಾಜನೆಂ"ದಾಗಲಿ “ಸಾಮ್ರಾಟನೆಂ"ದಾಗಲಿ ಕರೆಸಿಕೊಳ್ಳದೆ, “ಮಹಾಮಂಡಲೇಶ್ವರ” ನೆಂಬ ಕಡಿಮೆ ದರ್ಜೆಯ ಹೆಸರಿನಿಂದಲೇ ಕರೆಸಿಕೊಳ್ಳಹತ್ತಿದನು. ಎರಡು ವರ್ಷಗಳಿಗೊಮ್ಮೆ, ಅಥವಾ ನಾಲ್ಕು ವರ್ಷಗಳಿಗೊಮ್ಮೆ ಯಾವಾಗಾದರೂ ದರ್ಬಾರ ನೆರೆಯಿಸಿ, ಆಗ ಸದಾಶಿವರಾಯನನ್ನು ಸಿಂಹಾಸನದ ಮೇಲೆ ಕೂಡ್ರಿಸಿ, ಎಲ್ಲ ಮುಖ್ಯ ಮರ್ಯಾದೆಗಳನ್ನು ಆತನಿಗೇ ಕೊಡಿಸುತ್ತಿದ್ದನು. ಇಸವಿ ಸನ್ ೧೫೪೩ ರಿಂದ ಅಂದರೆ, ತನ್ನ ನಿಜವಾದ ಆಳಿಕೆಗೆ ಆರಂಭವಾದಂದಿನಿಂದ ರಾಮರಾಜನು ವಿಜಯನಗರದ ರಾಜ್ಯದ ಉತ್ಕರ್ಷವನ್ನು ಮಾಡಲಾರಂಭಿಸಿದನು. ಆತನು ವಿಜಾಪುರದ ಇಬ್ರಾಹಿಂ ಆದಿಲಶಹನಿಗೂ, ಗೋವಳಕೊಂಡದ ಕುತುಬಶಹನಿಗೂ ಬಹಳ ತ್ರಾಸು ಕೊಡಹತ್ತಿದನು. ವಿಜಾಪುರದ ಆದಿಲಶಹನ ಮೇಲಂತು ಆತನ ಸಿಟ್ಟು ಇದ್ದೇ ಇತ್ತು. ಆತನ ಸೇಡು ತೀರಿಸಿಕೊಳ್ಳುವ ಸಂಧಿಯನ್ನು ರಾಮರಾಜನು ನೋಡುತ್ತಿದ್ದನು. ಈ ಸಂಧಿಯನ್ನು ಇಬ್ರಾಹಿಂ ಆದಿಲಶಹನೇ ಒದಗಿಸಿಕೊಟ್ಟನು, ಆತನು ಗೋವಳಕೊಂಡದ ಬಾದಶಹನ ರಾಜ್ಯವನ್ನು ಕಸಿದುಕೊಂಡು, ತನ್ನ ರಾಜ್ಯವನ್ನು ಬೆಳೆಸುವ ಇಚ್ಛೆಯಿಂದ ರಾಮರಾಜನ ಸಹಾಯವನ್ನು ಬೇಡಿದನು. ಆಗ ರಾಮರಾಜನು ಆದಿಲಶಹನಿಗೆ ಸಹಾಯ ಮಾಡಿ ತನ್ನ ರಾಜ್ಯದೊಳಗಿನ ಆತನ ವಕೀಲನನ್ನು ತಿರುಗಿ ಕಳುಹಿ, ಕುಂಜವನವನ್ನು ತನ್ನ ಕೈಯಲ್ಲಿ ತಕ್ಕೊಂಡನು. ಹೀಗೆ ಮುಸಲ್ಮಾನರ ನಾಲ್ವರು ಬಾದಶಹರಲ್ಲಿ ಕಲಹವನ್ನುಂಟು ಮಾಡಿ, ತಾನು ಒಮ್ಮೆ ಒಬ್ಬರಿಗೆ, ಮತ್ತೊಮ್ಮೆ ಮತ್ತೊಬ್ಬರಿಗೆ ಸಹಾಯ ಮಾಡುತ್ತ, ರಾಮರಾಜನು ಬಲಿಷ್ಠನಾಗಹತ್ತಿದನು. ಮುಂದೆ ೧೫೫೭ರಲ್ಲಿ ಇಬ್ರಾಹಿಂ ಆದಿಲಶಹನು ಮರಣಹೊಂದಲು, ವಿಜಾಪುರದಲ್ಲಿ ಅಲೀ ಆದಿಲಶಹನ ಆಳ್ವಿಕೆ ಆರಂಭವಾಯಿತು.

ಅಲಿ ಆದಿಲಶಹನು ವಿಜಾಪುರದ ಸಿಂಹಾಸನವೇರಿದ ಬಳಿಕ ಆತನಿಗೂ